ಈ ಐತಿಹಾಸಿಕ ಸಂಪರ್ಕವು ಹಳ್ಳಿಯತ್ತ ಗಮನ ಸೆಳೆದಿದ್ದು, ದಶಕಗಳಲ್ಲಿನ ಅತ್ಯಂತ ಅಪಾಯಕಾರಿ ಮಿಲಿಟರಿ ದಾಳಿ ನಡೆಯುತ್ತಿರುವ ವೇಳೆ ಇರಾನ್ ನ ಶಾಂತಿಗಾಗಿ ಕಿಂತೂರ್ ನ ಕೆಲ ಜನರು ಪ್ರಾರ್ಥಿಸುತ್ತಿದ್ದಾರೆ.
ಕಥೆಯು 1830 ರ ಸುಮಾರಿಗೆ, ಶಿಯಾ ಧರ್ಮಗುರು ಮತ್ತು ಇಸ್ಲಾಂ ವಿದ್ವಾಂಸ ಸೈಯದ್ ಅಹ್ಮದ್ ಮುಸಾವಿ ಹಿಂದಿ ಕಿಂತೂರಿನಲ್ಲಿ ಜನಿಸಿದಾಗ ಆರಂಭವಾಗುತ್ತದೆ. ಧಾರ್ಮಿಕ ಶಿಕ್ಷಣದ ಬಗೆಗಿನ ಬದ್ಧತೆಯಿಂದ ಪ್ರೇರಿತರಾದ ಅವರು ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಲ್ಲಿ ಭಾರತವನ್ನು ತೊರೆದು ಇರಾಕ್ ಮೂಲಕ ಇರಾನ್‌ನಲ್ಲಿ ನೆಲೆಸಲು ಪ್ರಯಾಣಿಸಿದ್ದರು. ಅಲ್ಲಿ ಇಸ್ಲಾಮಿಕ್ ಪದ್ದತಿಗಳ ಅನ್ವೇಷಣೆಗಳನ್ನು ಮುಂದುವರೆಸಿ ತಮ್ಮ ಹೆಸರಿಗೆ “ಹಿಂದಿ” ಸೇರಿಸುವ ಮೂಲಕ ತಮ್ಮ ಭಾರತೀಯ ಗುರುತನ್ನು ಉಳಿಸಿಕೊಂಡಿದ್ದರು.

ಇರಾನ್ ನ ಖೊಮೇನ್‌ನಲ್ಲಿ ನೆಲೆಸಿ ಕುಟುಂಬ ಕಟ್ಟಿಕೊಂಡರು. ಸೈಯದ್ ಅಹ್ಮದ್ ಅವರ ಮಗ ಮುಸ್ತಫಾ ಹಿಂದಿ ಕೂಡ ಧರ್ಮಗುರುವಾದರು, ಮತ್ತು ಅವರ ಮೊಮ್ಮಗ ರುಹೊಲ್ಲಾ ಖೊಮೇನಿ ಇರಾನ್‌ನ ರಾಜಕೀಯ ಮತ್ತು ಧಾರ್ಮಿಕ ಭೂದೃಶ್ಯವನ್ನು ಶಾಶ್ವತವಾಗಿ ಬದಲಾಯಿಸಿದ ಕ್ರಾಂತಿಯನ್ನು ಮುನ್ನಡೆಸಿದರು.1902 ರಲ್ಲಿ ಜನಿಸಿದ ರುಹೊಲ್ಲಾ ಖೊಮೇನಿ ತನ್ನ ಅಜ್ಜ ಮತ್ತು ತಂದೆಯ ಧಾರ್ಮಿಕ ಬೋಧನೆಗಳು ಮತ್ತು ಪರಂಪರೆಯನ್ನು ಆನುವಂಶಿಕವಾಗಿ ಪಡೆದರು.
ಷಾ ಮೊಹಮ್ಮದ್ ರೆಜಾ ಪಹ್ಲವಿಯವರ ಪಾಶ್ಚಿಮಾತ್ಯ ಪರ ರಾಜಪ್ರಭುತ್ವಕ್ಕೆ ವಿರೋಧ ತೋರಿ 1960 ಮತ್ತು 70 ರ ದಶಕಗಳಲ್ಲಿ ಜನಸಾಮಾನ್ಯರ ಬೆಂಬಲವನ್ನು ಗಳಿಸಿ 1979 ರ ಇಸ್ಲಾಮಿಕ್ ಕ್ರಾಂತಿಯಲ್ಲಿ ಪರಾಕಾಷ್ಠೆಯಾಗಿ ಪರಿಣಮಿಸಿತು.
ಷಾ ಪದಚ್ಯುತಗೊಂಡ ನಂತರ, ಖೊಮೇನಿ ಇರಾನ್‌ನ ಮೊದಲ ಸರ್ವೋಚ್ಚ ನಾಯಕರಾದರು, ಇಸ್ಲಾಮಿಕ್ ಕಾನೂನಿನಿಂದ ನಿಯಂತ್ರಿಸಲ್ಪಡುವ ದೇವಪ್ರಭುತ್ವ ಸ್ಥಾಪಿಸಿದರು. ಅವರ ನಾಯಕತ್ವವು ಇರಾನ್‌ನ ಪಾಶ್ಚಿಮಾತ್ಯ ವಿರೋಧಿ ನಿಲುವನ್ನು ವ್ಯಾಖ್ಯಾನಿಸಿ ಆಂತರಿಕ ಕಾನೂನುಗಳನ್ನು ಪರಿವರ್ತಿಸಿತುಮಧ್ಯಪ್ರಾಚ್ಯ ರಾಜಕೀಯದಲ್ಲಿ ಪ್ರಬಲ ಪರ್ಯಾಯವನ್ನು ಸೃಷ್ಟಿಸಿತು. 1989 ಜೂನ್ 3 ರಂದು ರುಹೊಲ್ಲಾ ಖೊಮೇನಿ ನಿಧನ ಹೊಂದಿದರು. ಆ ನಂತರ ಈಗ ಆಳ್ವಿಕೆ ನಡೆಸುತ್ತಿರುವ ಅಲಿ ಹೊಸೇನಿ ಖಮೇನಿ ಅವರನ್ನು ಇರಾನ್ ನ ಸರ್ವೋಚ್ಚ ನಾಯಕನನ್ನಾಗಿ ಆಯ್ಕೆ ಮಾಡಲಾಗಿತ್ತು. ರುಹೊಲ್ಲಾ ಖೊಮೇನಿಯ ಅತ್ಯಾಪ್ತರಲ್ಲಿ ಖಮೇನಿ ಒಬ್ಬರಾಗಿದ್ದರು.
ಕಿಂತೂರ್ ನಲ್ಲಿ ಇನ್ನೂ ಇದ್ದಾರೆ
ಕಿಂತೂರ್‌ನಲ್ಲಿ, ಅಯತೊಲ್ಲಾ ಖೊಮೇನಿ ಅವರ ಕುಟುಂಬವು ಇನ್ನೂ ಮಹಲ್ ಮೊಹಲ್ಲಾ ಎಂಬ ನೆರೆಹೊರೆಯಲ್ಲಿ ವಾಸಿಸುತ್ತಿದೆ. ನಿಹಾಲ್ ಕಾಜ್ಮಿ, ಡಾ. ರೆಹಾನ್ ಕಾಜ್ಮಿ ಮತ್ತು ಆದಿಲ್ ಕಾಜ್ಮಿ ತಮ್ಮ ಪೂರ್ವಜರನ್ನು ಅಹ್ಮದ್ ಮುಸಾವಿ ಹಿಂದಿ ಎಂದು ಹೆಮ್ಮೆಯಿಂದ ಗುರುತಿಸುತ್ತಾರೆ, ಆಧುನಿಕ ಇರಾನ್ ಅನ್ನು ತನ್ನ ವಂಶಾವಳಿಯ ಮೂಲಕ ರೂಪಿಸಿದ ವ್ಯಕ್ತಿಯ ನೇರ ವಂಶಸ್ಥರು ಎಂದು ತಮ್ಮನ್ನು ತಾವು ಕರೆದುಕೊಳ್ಳುತ್ತಾರೆ.
ಮನೆಯೊಳಗೆ, ಖೊಮೇನಿಯ ಛಾಯಾಚಿತ್ರಗಳು ಗೋಡೆಗಳನ್ನು ಅಲಂಕರಿಸಿವೆ.
”ಭಾರತಕ್ಕಾಗಿ ತಮ್ಮ ಹೃದಯ ಬಡಿಯುವುದನ್ನು ತೋರಿಸಲು ತಮ್ಮ ಹೆಸರಿಗೆ ‘ಹಿಂದಿ’ ಸೇರಿಸಿಕೊಂಡರು” ಎಂದು ಆದಿಲ್ ಕಜ್ಮಿ ಹೇಳಿದ್ದಾರೆ. “ನಾವು ಇರಾನ್‌ಗೆ ಭೇಟಿ ನೀಡಿ ನಾವು ಕಿಂತೂರಿನವರು ಎಂದು ಜನರಿಗೆ ಹೇಳಿದಾಗ, ಅವರು ನಮ್ಮನ್ನು ಬಹಳ ಗೌರವದಿಂದ ಸ್ವಾಗತಿಸಿದರು. ಅವರ ಆಧ್ಯಾತ್ಮಿಕ ನಾಯಕ ಎಲ್ಲಿಂದ ಬಂದವರು ಎಂಬುದನ್ನು ಅವರು ನೆನಪಿಸಿಕೊಳ್ಳುತ್ತಿದ್ದರು ಎಂಬುದು ಸ್ಪಷ್ಟವಾಗಿತ್ತು” ಎಂದು ಹೇಳಿದ್ದಾರೆ.
ಕಿಂತೂರಿನ ಗ್ರಾಮಸ್ಥರು ಐತಿಹಾಸಿಕ ನಂಟನ್ನು ಅಪಾರ ಹೆಮ್ಮೆಯ ವಿಷಯವೆಂದು ಪರಿಗಣಿಸುತ್ತಿದ್ದಾರೆ. ಕೇವಲ ವಂಶಾವಳಿಯ ಬದಲಿಗೆ ಬೌದ್ಧಿಕ ಮತ್ತು ಆಧ್ಯಾತ್ಮಿಕ ಪರಂಪರೆಯಾಗಿಯೂ ಪರಿಗಣಿಸುತ್ತಿದ್ದಾರೆ.ಸದ್ಯ ಶಾಂತಿಗಾಗಿ ಪ್ರಾರ್ಥನೆಯನ್ನೂ ನಡೆಸುತ್ತಿದ್ದಾರೆ.
ಸಂಬಂಧವಿಲ್ಲ
ಇರಾನ್‌ನ ಪ್ರಸ್ತುತ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಭಾರತದೊಂದಿಗಿನ ಸಂಪರ್ಕದ ಬಗ್ಗೆ ಕೆಲವು ಗೊಂದಲಗಳು ಹೊರಹೊಮ್ಮಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿದ ಕಾಜ್ಮಿ ಕುಟುಂಬ “ಖಮೇನಿಗೂ ಕಿಂತೂರ್‌ಗೂ ಯಾವುದೇ ಪೂರ್ವಜರ ಸಂಬಂಧವಿಲ್ಲ. ಅವರು ಅಯತೊಲ್ಲಾ ಖಮೇನಿಯವರ ಶಿಷ್ಯ ಮತ್ತು ರಾಜಕೀಯ ಉತ್ತರಾಧಿಕಾರಿ, ಆದರೆ ನಮ್ಮ ಕುಟುಂಬ ಅಥವಾ ಹಳ್ಳಿಯಿಂದ ಬಂದವರಲ್ಲ” ಎಂದು ಹೇಳಿದ್ದಾರೆ.
“ಇಸ್ರೇಲ್ ನಡೆಸಿದ ದಾಳಿಗಳು ಅಮಾನವೀಯವಾಗಿವೆ. ಇರಾನ್ ರಕ್ಷಣಾತ್ಮಕವಾಗಿ ಪ್ರತಿಕ್ರಿಯಿಸುತ್ತಿದೆ. ಈ ಯುದ್ಧ ಬೇಗ ಕೊನೆಗೊಳ್ಳಲಿ ಮತ್ತು ಶಾಂತಿ ನೆಲೆಸಲಿ ಎಂದು ನಾವು ಪ್ರಾರ್ಥಿಸುತ್ತೇವೆ. ರಕ್ತಪಾತದಿಂದ ಯಾರಿಗೂ ಪ್ರಯೋಜನವಿಲ್ಲ” ಎಂದು ಡಾ. ರೆಹಾನ್ ಕಾಜ್ಮಿ ಹೇಳಿದರು.




