ಮುಂಬೈ: ಜನದಟ್ಟಣೆಯ ಸಂದರ್ಭದಲ್ಲಿ ಮಿತಿಮೀರಿ ತುಂಬಿದ್ದ ರೈಲಿನಿಂದ ಆಯತಪ್ಪಿ ಕೆಳಗೆ ಬಿದ್ದು ಐವರು ಪ್ರಯಾಣಿಕರು ಸಾವನ್ನ*ಪ್ಪಿದ್ದು, ಹಲವಾರು ಜನರು ಗಾಯಗೊಂಡಿರುವ ಘಟನೆ ಸೋಮವಾರ (ಜೂನ್ 09) ದಿವಾ ಮತ್ತು ಕೋಪರ್ ರೈಲ್ವೆ ನಿಲ್ದಾಣಗಳ ನಡುವೆ ಸಂಭವಿಸಿರುವುದಾಗಿ ವರದಿ ತಿಳಿಸಿದೆ.
ಪ್ರಾಥಮಿಕ ವರದಿ ಪ್ರಕಾರ, ಛತ್ರಿಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನತ್ತ ತೆರಳುತ್ತಿದ್ದ ಸ್ಥಳೀಯ ರೈಲಿನ ಬೋಗಿಗಳಿಂದ 10ರಿಂದ 12 ಜನ ಪ್ರಯಾಣಿಕರು ಕೆಳಗೆ ಬಿದ್ದಿರುವುದಾಗಿ ವಿವರಿಸಿದೆ.
ಘಟನೆ ನಡೆದಾಗ ರೈಲು ಮಿತಿಮೀರಿದ ಜನರಿಂದ ತುಂಬಿದ್ದು, ಪ್ರಯಾಣಿಕರು ರೈಲಿನ ಬಾಗಿಲಿನಲ್ಲಿ ನೇತಾಡುತ್ತಿದ್ದರು. ಈ ಸಂದರ್ಭದಲ್ಲಿ ಆಯತಪ್ಪಿ ಕೆಳಬಿದ್ದ ಪರಿಣಾಮ ಐವರು ಕೊನೆಯುಸಿರೆಳೆದಿದ್ದು, ಕೆಲವರು ಗಾಯಗೊಂಡಿದ್ದರು. ಗಾಯಗೊಂಡವರನ್ನು ಸ್ಥಳೀಯ ಕಾಲ್ವಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.
ಸಾವನ್ನ*ಪ್ಪಿದ್ದ ಪ್ರಯಾಣಿಕರು 30-35 ವರ್ಷದೊಳಗಿನವರಾಗಿದ್ದು, ಅವರ ಗುರುತನ್ನು ಇನ್ನಷ್ಟೇ ಪತ್ತೆ ಹಚ್ಚಬೇಕಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಸ್ವಯಂಚಾಲಿತ ಡೋರ್ ಕ್ಲೋಸ್ ವ್ಯವಸ್ಥೆ:
ಮಿತಿಮೀರಿದ ಜನದಟ್ಟಣೆಯಿಂದ ಐವರು ಪ್ರಯಾಣಿಕರು ಸಾವ*ನ್ನಪ್ಪಿದ ಘಟನೆ ನಂತರ ಪ್ರತಿಕ್ರಿಯೆ ನೀಡಿರುವ ರೈಲ್ವೆ ಅಧಿಕಾರಿಗಳು, ಮುಂಬೈನ ಸಬ್ ಅರ್ಬನ್ ಗಾಗಿ ನಿರ್ಮಾಣ ಹಂತದಲ್ಲಿರುವ ಎಲ್ಲಾ ರೈಲುಗಳಲ್ಲಿ ಸ್ವಯಂಚಾಲಿತ ಡೋರ್ ಕ್ಲೋಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.
ಮುಂಬೈ ಮಹಾನಗರಿಯಲ್ಲಿ ರೈಲುಗಳಲ್ಲಿ ಜನದಟ್ಟಣೆ ನಿಯಂತ್ರಿಸುವುದೇ ದೊಡ್ಡ ಸವಾಲಾಗಿದೆ. ಈ ನಿಟ್ಟಿನಲ್ಲಿ ಸ್ವಯಂಚಾಲಿತ ಡೋರ್ ಕ್ಲೋಸ್ ವ್ಯವಸ್ಥೆ ರೈಲಿನಲ್ಲಿ ಅಳವಡಿಸುವ ಮಹತ್ವದ ನಿರ್ಧಾರ ತೆಗೆದುಕೊಂಡಿರುವುದಾಗಿ ರೈಲ್ವೆ ಇಲಾಖೆ ತಿಳಿಸಿದೆ.

