ನವದೆಹಲಿ: 'ಆಪರೇಷನ್ ಸಿಂಧು' ಕಾರ್ಯಾಚರಣೆಯಲ್ಲಿ 500ಕ್ಕೂ ಅಧಿಕ ಭಾರತೀಯರು ತಾಯ್ನಾಡಿಗೆ ಮರಳಿದ್ದಾರೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ಶನಿವಾರ ತಿಳಿಸಿದೆ.
ಅಪರೇಷನ್ ಸಿಂಧು ಅಡಿ ಸ್ಥಳಾಂತರಗೊಳಿಸಿದ ಮಾಹಿತಿಯನ್ನು ಎಂಇಎ ಎಕ್ಸ್‌ನಲ್ಲಿ ಹಂಚಿಕೊಂಡಿದೆ.
ಇಸ್ರೇಲ್ ಜೊತೆಗಿನ ಸಂಘರ್ಷದಿಂದಾಗಿ ಇರಾನ್‌ನಲ್ಲಿರುವ ಭಾರತೀಯರನ್ನು ಸ್ಥಳಾಂತರ ನಡೆಸುವ ಕಾರ್ಯ ನಡೆಯುತ್ತಿದ್ದು, ವಿದ್ಯಾರ್ಥಿಗಳು ಸೇರಿ ಹಲವು ಭಾರತೀಯರು ಶುಕ್ರವಾರ ತಡರಾತ್ರಿ ಹಾಗೂ ಶನಿವಾರ ಮುಂಜಾನೆ ದೆಹಲಿಗೆ ಬಂದಿಳಿದಿದ್ದಾರೆ.
ಇರಾನ್‌ನಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಕರೆತರಲು ಸರ್ಕಾರ ಬುಧವಾರ ಆಪರೇಷನ್ ಸಿಂಧು ಘೋಷಣೆ ಮಾಡಿತ್ತು.
'ಅಪರೇಷನ್ ಸಿಂಧು ವಿಮಾನ ನಾಗರಿಕರನ್ನು ತವರಿಗೆ ಕರೆತಂದಿದೆ. ಧಾರ್ಮಿಕ ಯಾತ್ರಿಕರು ಹಾಗೂ ವಿದ್ಯಾರ್ಥಿಗಳು ಸೇರಿ ಭಾರತದ ನಾಗರಿಕರನ್ನು ಚಾರ್ಟಡ್ ವಿಮಾನದಲ್ಲಿ ಕರೆತರಲಾಗಿದೆ. ಜೂನ್ 20 ರಾತ್ರಿ 11.30ಕ್ಕೆ ವಿಮಾನ ದೆಹಲಿಗೆ ಬಂದಿಳಿಯಿತು. ಅವರನ್ನು ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ಅರುಣ್ ಚಟರ್ಜಿ ಬರಮಾಡಿಕೊಂಡರು' ಎಂದು ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ 'ಎಕ್ಸ್'ನಲ್ಲಿ ಮಾಹಿತಿ ನೀಡಿದ್ದಾರೆ.
ಸ್ಥಳಾಂತರ ಪ್ರಕ್ರಿಯೆ ಸುಗಮವಾಗಲು ಸಹಕರಿಸಿದ ಇರಾನ್ ಸರ್ಕಾರಕ್ಕೆ ಭಾರತ ಸರ್ಕಾರವು ಕೃತಜ್ಞವಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಇನ್ನೊಂದು ಎಕ್ಸ್ ಪೋಸ್ಟ್‌ನಲ್ಲಿ ತುರ್ಕೆಮೆನಿಸ್ತಾನ್‌ನಿಂದ ಆಗಮಿಸಿದ ವಿಮಾನದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
'ಆಪರೇಷನ್ ಸಿಂಧು ಮುಂದುವರಿಯುತ್ತಿದೆ. ತುರ್ಕೆಮೆನಿಸ್ತಾನ್‌ನ ಅಶ್ಗಾಬಾತ್‌ನಿಂದ ಭಾರತೀಯರು ಇದ್ದ ವಿಶೇಷ ವಿಮಾನ ಜೂನ್ 21ರ ಮುಂಜಾನೆ 3ಗಂಟೆಗೆ ದೆಹಲಿಗೆ ಬಂದಿತು. ಇದರೊಂದಿಗೆ ಆಪರೇಷನ್ ಸಿಂಧು ಅಡಿ 517 ಭಾರತೀಯರು ತಾಯ್ನಾಡಿಗೆ ಮರಳಿದ್ದಾರೆ' ಎಂದು ಅವರು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಡಿ 110 ಮಂದಿಯ ಮೊದಲ ಬ್ಯಾಚ್ ಗುರುವಾರ ದೆಹಲಿಗೆ ಆಗಮಿಸಿತ್ತು.




