ಶ್ರೀನಗರ: ಪಹಲ್ಗಾಮ್ ದಾಳಿಯ ಭಯೋತ್ಪಾದಕರಿಗೆ ಆಶ್ರಯ ನೀಡಿದ ಆರೋಪದ ಮೇಲೆ ಇಬ್ಬರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಭಾನುವಾರ ಬಂಧಿಸಿದೆ.
ಬಟ್ಕೋಟೆಯ ಪರ್ವೇಜ್ ಅಹ್ಮದ್ ಜೋಥರ್ ಮತ್ತು ಪಹಲ್ಗಾಮ್‌ನ ಹಿಲ್ ಪಾರ್ಕ್‌ನ ಬಶೀರ್ ಅಹ್ಮದ್ ಜೋಥರ್ ಬಂಧಿತರು. ಇವರು ದಾಳಿಯಲ್ಲಿ ಭಾಗಿಯಾಗಿರುವ ಮೂವರು ಶಸ್ತ್ರಸಜ್ಜಿತ ಭಯೋತ್ಪಾದಕರ ಗುರುತನ್ನು ಬಹಿರಂಗಪಡಿಸಿದ್ದಾರೆ ಎಂದು ಎನ್‌ಐಎ ಹೇಳಿದೆ.
ದಾಳಿಕೋರರು ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತಯಬಾಗೆ (ಎಲ್‌ಇಟಿ)ಸೇರಿದ ಪಾಕಿಸ್ತಾನ ಪ್ರಜೆಗಳು ಎಂದು ಅವರು ದೃಢಪಡಿಸಿದ್ದಾಗಿ ಸಂಸ್ಥೆ ಹೇಳಿದೆ.
ಪರ್ವೇಜ್ ಮತ್ತು ಬಶೀರ್ ದಾಳಿಗೆ ಮುನ್ನ ಹಿಲ್ ಪಾರ್ಕ್‌ನಲ್ಲಿರುವ ಗುಡಿಸಲಲ್ಲಿ ಮೂವರು ಶಸ್ತ್ರಸಜ್ಜಿತ ಭಯೋತ್ಪಾದಕರಿಗೆ ಆಶ್ರಯ ನೀಡಿದ್ದರು. ಅವರಿಗೆ ಆಹಾರ, ಆಶ್ರಯ ಸೇರಿದಂತೆ ಎಲ್ಲಾ ರೀತಿಯ ಬೆಂಬಲ ನೀಡಿದ್ದರು.
1967ರ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ಸೆಕ್ಷನ್ 19ರ ಅಡಿಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದೂ ಎಎನ್‌ಐ ಹೇಳಿದೆ.
ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ 26 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು.




