ಅಹಮದಾಬಾದ್: 270 ಮಂದಿಯ ಜೀವವನ್ನು ಬಲಿಪಡೆದ ಅಹಮದಾಬಾದ್ ವಿಮಾನ ದುರಂತದ ನಡೆದು ನಾಲ್ಕು ದಿನಗಳ ಬಳಿಕ ಡಿಎನ್‌ಎ ಪರೀಕ್ಷೆ ಮೂಲಕ 99 ಮೃತದೇಹಗಳ ಗುರುತು ಪತ್ತೆ ಮಾಡಲಾಗಿದೆ.
ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸಹಿತ 64 ಮೃತದೇಹಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಸಿಬ್ಬಂದಿ ಸೇರಿ ಒಟ್ಟು 242 ಮಂದಿ ಪ್ರಯಾಣಿಸುತ್ತಿದ್ದ ದುರಂತಕ್ಕೀಡಾದ ವಿಮಾನದಲ್ಲಿ ರೂಪಾನಿ ಕೂಡ ಇದ್ದರು. ಅವರ ಮೃತದೇಹದ ಅವಶೇಷಗಳನ್ನು ಅಹಮಾದಾಬಾದ್ ನಗರ ಆಸ್ಪತ್ರೆಯಲ್ಲಿ ಪತ್ನಿ ಅಂಜಲಿ ರೂಪಾನಿ ಹಾಗೂ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ಗುರತು ಪತ್ತೆ ಮಾಡಲು ಆಗದಷ್ಟು ಮೃತದೇಹಗಳು ಸುಟ್ಟುಹೋಗಿದ್ದು, ಹೀಗಾಗಿ ಅಧಿಕಾರಿಗಳು ಡಿಎನ್‌ಎ ಪರೀಕ್ಷೆ ನಡೆಸುತ್ತಿದ್ದಾರೆ.
ಈವರೆಗೆ 99 ಡಿಎನ್‌ಎ ಮಾದರಿಗಳು ಹೊಂದಾಣಿಯಾಗಿವೆ. ಈಗಾಗಲೇ 64 ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಮೃತರಲ್ಲಿ ಹೆಚ್ಚಿನವರು ಗುಜರಾತ್ ಹಾಗೂ ರಾಜಸ್ಥಾನದ ವಿವಿಧ ಭಾಗಗಳಿಗೆ ಸೇರಿದವರು ಎಂದು ಆಸ್ಪತ್ರೆ ವರಿಷ್ಠಾಧಿಕಾರಿ ಡಾ. ರಾಕೇಶ್ ಜೋಶಿ ವರದಿಗಾರರಿಗೆ ತಿಳಿಸಿದ್ದಾರೆ.
'ಮೃತರ ಕುಟುಂವಬಸ್ಥರು ಆತಂಕ ಪಡುವ ಅಗತ್ಯವಿಲ್ಲ. ಡಿಎನ್‌ಎ ಪರೀಕ್ಷೆ ಮಾಡಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ' ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
'ಈ ಪ್ರಕ್ರಿಯೆಯನ್ನು ಸಾಧ್ಯವಾದಷ್ಟು ಬೇಗ ಮುಗಿಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ. 72 ಗಂಟೆಗಳ ನಂತರವೂ ಫಲಿತಾಂಶಗಳು ಬಂದಿಲ್ಲ ಎಂದು ಕೆಲವರು ದೂರುತ್ತಿದ್ದಾರೆ. ಭಯಪಡಬೇಡಿ ಎಂದು ನಾನು ಅವರಿಗೆ ಮನವಿ ಮಾಡುತ್ತೇನೆ. ಇದು ಕಾನೂನು ಪರಿಣಾಮಗಳನ್ನು ಹೊಂದಿರುವ ಬಹಳ ಮುಖ್ಯವಾದ ಪ್ರಕ್ರಿಯೆಯಾಗಿದೆ. ಫಲಿತಾಂಶಗಳು ಬಂದ ತಕ್ಷಣ ನಾವು ಅವರಿಗೆ ತಿಳಿಸುತ್ತೇವೆ' ಎಂದು ಜೋಶಿ ಹೇಳಿದ್ದಾರೆ.

