ಲಂಡನ್: ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದ ಬಗ್ಗೆ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.
'ಭಾರತದ ಅಹಮದಾಬಾದ್ ನಗರದಿಂದ ಬ್ರಿಟಿಷ್ ಪ್ರಜೆಗಳನ್ನು ಹೊತ್ತು ಲಂಡನ್‌ಗೆ ಹೊರಟಿದ್ದ ವಿಮಾನ ಅಪಘಾತಕ್ಕೀಡಾಗುವ ದೃಶ್ಯಗಳು ವಿನಾಶಕಾರಿ ಮತ್ತು ತೀವ್ರ ದುಃಖಕರವಾಗಿವೆ.
ವಿಮಾನ ದುರಂತದ ಬಗ್ಗೆ ಅಧಿಕಾರಿಗಳಿಂದ ನಿರಂತರವಾಗಿ ಮಾಹಿತಿ ಪಡೆಯುತ್ತಿದ್ದೇನೆ. ಸಂಕಷ್ಟಕ್ಕೆ ಸಿಲುಕಿರುವ ಪ್ರಯಾಣಿಕರು ಮತ್ತು ಅವರ ಕುಟುಂಬಸ್ಥರಿಗೆ ಅಗತ್ಯ ನೆರವು ಒದಗಿಸಲಾಗುವುದು' ಎಂದು ಕೀರ್ ಸ್ಟಾರ್ಮರ್ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಗುಜರಾತ್‌ನ ಅಹಮದಾಬಾದ್‌ನಿಂದ ಇಂಗ್ಲೆಂಡ್‌ನ ಲಂಡನ್‌ನ ಗ್ಯಾಟ್‌ವಿಕ್‌ಗೆ ಪ್ರಯಾಣ ಆರಂಭಿಸಿದ್ದ ಏರ್ ಇಂಡಿಯಾ ವಿಮಾನವು ಮೇಘಾನಿನಗರ್ ಪ್ರದೇಶದಲ್ಲಿ ಇಂದು (ಗುರುವಾರ) ಮಧ್ಯಾಹ್ನ 1.40ರ ಸುಮಾರಿಗೆ ಪತನಗೊಂಡಿದೆ.
ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ 242 ಪ್ರಯಾಣಿಕರು ದುರಂತಕ್ಕೀಡಾದ ವಿಮಾನದಲ್ಲಿ ಇದ್ದರು. ಈ ಪೈಕಿ 169 ಜನ ಭಾರತೀಯ ಪ್ರಜೆಗಳು, 53 ಜನ ಬ್ರಿಟಿಷ್ ಪ್ರಜೆಗಳು, ಒಬ್ಬರು ಕೆನಡಾದವರು ಹಾಗೂ 7 ಮಂದಿ ಪೋರ್ಚುಗಲ್ ಪ್ರಜೆಗಳಿದ್ದರು ಎಂದು ಏರ್ ಇಂಡಿಯಾ ಸಂಸ್ಥೆ ಮಾಹಿತಿ ನೀಡಿದೆ.




