ನವದೆಹಲಿ: ಅಹಮದಾಬಾದ್‌ನಲ್ಲಿ ಅಪಘಾತಕ್ಕೀಡಾದ ಏರ್ ಇಂಡಿಯಾದ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನದ ಮುಂಭಾಗದ ಬ್ಲ್ಯಾಕ್ ಬಾಕ್ಸ್‌ನ ಮೆಮೊರಿ ಮಾಡ್ಯೂಲ್‌ನಿಂದ ಯಶಸ್ವಿಯಾಗಿ ಮಾಹಿತಿ ಕಲೆ ಹಾಕಲಾಗಿದೆ. ಅದರಲ್ಲಿನ ಡೇಟಾವನ್ನು ಇಲ್ಲಿನ ಅತ್ಯಾಧುನಿಕ ಸರ್ಕಾರಿ ಪ್ರಯೋಗಾಲಯದಲ್ಲಿ ಡೌನ್‌ಲೋಡ್ ಮಾಡಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಗುರುವಾರ ತಿಳಿಸಿದೆ.
ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (ಸಿವಿಆರ್) ಮತ್ತು ಫ್ಲೈಟ್ ಡೇಟಾ ರೆಕಾರ್ಡರ್ (ಎಫ್‌ಡಿಆರ್) ವಿಶ್ಲೇಷಣೆ ನಡೆಯುತ್ತಿದೆ. ಈ ವಿಶ್ಲೇಷಣೆಯು ಅಪಘಾತಕ್ಕೆ ಕಾರಣಗಳನ್ನು ಪತ್ತೆ ಮಾಡುವುದು ಮತ್ತು ವಾಯುಯಾನ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಭವಿಷ್ಯದಲ್ಲಿ ಅವಘಡಗಳನ್ನು ತಪ್ಪಿಸಲು ಕ್ರಮ ಕೈಗೊಳ್ಳಲು ಅನುಕೂಲಕರವಾಗಿದೆ ಎಂದು ಅದು ತಿಳಿಸಿದೆ.
ಜೂನ್ 12 ರಂದು ಅಪಘಾತಕ್ಕೀಡಾದ ವಿಮಾನದ ಎರಡು ಬ್ಲ್ಯಾಕ್ ಬಾಕ್ಸ್‌ಗಳಾದ ಸಿವಿಆರ್ ಮತ್ತು ಎಫ್‌ಡಿಆರ್‌ಗಳನ್ನು ವಿಮಾನ ಅಪಘಾತ ತನಿಖಾ ಬ್ಯೂರೊ (ಎಎಐಬಿ) ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ.
ಅಂತರರಾಷ್ಟ್ರೀಯ ಶಿಷ್ಟಾಚಾರದ ಪ್ರಕಾರ ರಚಿಸಲಾದ ಈ ತಂಡವು ಎಎಐಬಿ ಮಹಾನಿರ್ದೇಶಕರ ನೇತೃತ್ವದಲ್ಲಿದ್ದು, ವಾಯುಯಾನ ವೈದ್ಯಕೀಯ ತಜ್ಞರು, ಎಟಿಸಿ ಅಧಿಕಾರಿ ಮತ್ತು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (ಎನ್‌ಟಿಎಸ್‌ಬಿ) ಪ್ರತಿನಿಧಿಗಳನ್ನು ಒಳಗೊಂಡಿದೆ.
ಜೂನ್ 24ರಂದು ಬ್ಲ್ಯಾಕ್ ಬಾಕ್ಸ್‌ಗಳನ್ನು ಸಂಪೂರ್ಣ ಭದ್ರತೆಯೊಂದಿಗೆ ವಾಯುಪಡೆಯ ವಿಮಾನದ ಮೂಲಕ ಅಹಮದಾಬಾದ್‌ನಿಂದ ದೆಹಲಿಗೆ ತರಲಾಗಿತ್ತು.
ಅಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಡಿಜಿ, ಎಎಐಬಿ ಸದಸ್ಯರ ಜೊತೆಗೆ ಮುಂಭಾಗದ ಬ್ಲ್ಯಾಕ್ ಬಾಕ್ಸ್ ಅನ್ನು ಎಎಐಬಿ ಲ್ಯಾಬ್‌ಗೆ ತರಲಾಗಿತ್ತು. ಹಿಂಭಾಗದ ಬ್ಲ್ಯಾಕ್ ಬಾಕ್ಸ್ ಅನ್ನು ಎಎಐಬಿಯ ಎರಡನೇ ತಂಡವು 5.15ರ ಸುಮಾರಿಗೆ ದೆಹಲಿಯ ಲ್ಯಾಬ್‌ಗೆ ತಂದಿತ್ತು.
'ಜೂನ್ 24 ರ ಸಂಜೆ ಡಿಜಿ, ಎಎಐಬಿ ನೇತೃತ್ವದ ತಂಡವು ಎಎಐಬಿ ಮತ್ತು ಎನ್‌ಟಿಎಸ್‌ಬಿಯ ತಾಂತ್ರಿಕ ಸದಸ್ಯರೊಂದಿಗೆ ಡೇಟಾ ಕಲೆಹಾಕುವ ಪ್ರಕ್ರಿಯೆಯನ್ನು ಪ್ರಾರಂಭಿಸಿತ್ತು. ಮುಂಭಾಗದ ಬ್ಲ್ಯಾಕ್ ಬಾಕ್ಸ್‌ನಿಂದ ಕ್ರ್ಯಾಶ್ ಪ್ರೊಟೆಕ್ಷನ್ ಮಾಡ್ಯೂಲ್ (ಸಿಪಿಎಂ) ಅನ್ನು ಸುರಕ್ಷಿತವಾಗಿ ಹೊರತೆಗೆಲಾಯಿತು. ಜೂನ್ 25 ರಂದು, ಮೆಮೊರಿ ಮಾಡ್ಯೂಲ್ ಅನ್ನು ಯಶಸ್ವಿಯಾಗಿ ಆಕ್ಸೆಸ್ ಮಾಡಲಾಯಿತು. ಬಳಿಕ, ಅದರ ಡೇಟಾವನ್ನು ಎಎಐಬಿ ಲ್ಯಾಬ್‌ನಲ್ಲಿ ಡೌನ್‌ಲೋಡ್ ಮಾಡಲಾಗಿದೆ'ಎಂದು ಹೇಳಿಕೆ ತಿಳಿಸಿದೆ.
ಸಿವಿಆರ್ ಮತ್ತು ಎಫ್‌ಡಿಆರ್ ದತ್ತಾಂಶಗಳ ವಿಶ್ಲೇಷಣೆ ನಡೆಯುತ್ತಿದೆ. ಈ ಪ್ರಯತ್ನಗಳು ಅಪಘಾತಕ್ಕೆ ಕಾರಣವಾದ ಘಟನೆಗಳ ಅನುಕ್ರಮವನ್ನು ಮತ್ತೆ ಮಾಡಲು ಮತ್ತು ಭವಿಷ್ಯದ ವಾಯುಯಾನ ಸುರಕ್ಷತೆಯನ್ನು ಹೆಚ್ಚಿಸಲು ಹಾಗೂ ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಹಕಾರಿಯಾಗಿವೆ.
ಎಲ್ಲ ಕ್ರಮಗಳನ್ನು ದೇಶೀಯ ಕಾನೂನುಗಳು ಮತ್ತು ಅಂತರರಾಷ್ಟ್ರೀಯ ಕಟ್ಟುಪಾಡುಗಳಿಗೆ ಅನುಗುಣವಾಗಿ ನಡೆಸಲಾಗಿದೆ ಎಂದು ಅದು ಹೇಳಿದೆ.




