ನ್ಯೂಯಾರ್ಕ್/ವಾಷಿಂಗ್ಟನ್: ಅಮೆರಿಕವು ಭಾರತ, ಪಾಕಿಸ್ತಾನ ಎರಡೂ ದೇಶಗಳ ಜೊತೆಗೆ ಸಂಬಂಧವನ್ನು ಹೊಂದಿರಬೇಕು. ಯಾವುದಾದರೂ ಒಂದು ದೇಶದ ಜೊತೆ ಮಾತ್ರ ಸಂಬಂಧ ಹೊಂದಿರಬೇಕು ಎಂಬ ಭಾವನೆ ಇರಬೇಕಿಲ್ಲ ಎಂದು ಅಮೆರಿಕದ ಸೇನಾ ಜನರಲ್ ಹೇಳಿದ್ದಾರೆ.
ಅಮೆರಿಕ ಸಶಸ್ತ್ರ ಸೇವೆಗಳ ಸಮಿತಿಯ ಸಭೆಯಲ್ಲಿ ಮಾತನಾಡಿದ ಸೇನಾ ಜನರಲ್ ಮಿಚೆಲ್ ಕುರಿಲ್ಲಾ, 'ನಾವು ಸಂಬಂಧದ ಸಕಾರಾತ್ಮಕ ಅಂಶವನ್ನು ಮಾತ್ರ ನೋಡಬೇಕು.
ಪಾಕಿಸ್ತಾನದ ಪಾಲುದಾರಿಕೆಯೊಂದಿಗೆ ತಾಲಿಬಾನ್ ಐಸಿಸ್ ಕೊರಾಸನ್‌ನ 12ಕ್ಕೂ ಹೆಚ್ಚು ಜನರನ್ನು ಕೊಲ್ಲಲಾಗಿದೆ. ನಾವು ಪಾಕಿಸ್ತಾನಕ್ಕೆ ಗುಪ್ತಚರ ಸಹಕಾರ ನಿಡಿದರೆ, ಆ ದೇಶದವರು ಐಸಿಸ್ ಕೊರಾಸನ್‌ನ ಕನಿಷ್ಠ ಐವರನ್ನು ಸೆರೆಹಿಡಿಯುತ್ತಾರೆ' ಎಂದು ತಿಳಿಸಿದ್ದಾರೆ.
'2021ರಲ್ಲಿ ಕಾಬೂಲ್‌ನಲ್ಲಿ ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟು, ಅಮೆರಿಕದ 13 ಯೋಧರು ಮತ್ತು 160 ನಾಗರಿಕರ ಸಾವಿಗೆ ಕಾರಣನಾದ ಭಯೋತ್ಪಾದಕ ಮೊಹಮ್ಮದ್ ಶರೀಫ್‌ಉಲ್ಲಾನನ್ನು ಹಸ್ತಾಂತರಿಸುವುದಾಗಿ ಪಾಕಿಸ್ತಾನ ಹೇಳಿದೆ. ಪಾಕಿಸ್ತಾನದಲ್ಲಿ ಗುಪ್ತಚರ ವಿಭಾಗ ಶಕ್ತಿಯುತವಾಗಿಲ್ಲ ಎನ್ನುವುದು ನಮಗೆ ಗೊತ್ತಿದೆ. ಅವರಿಗೆ ಸೂಕ್ತ ಸಹಕಾರ ನೀಡಿದರೆ, ಅದು ಐಸಿಸ್-ಕೆ ಮೇಲೆ ಪರಿಣಾಮ ಬೀರುತ್ತದೆ' ಎಂದು ಹೇಳಿದ್ದಾರೆ.
'ಐಸಿಸ್-ಕೆ ಭಯೋತ್ಪಾದಕರು ಪಾಕಿಸ್ತಾನ ಗಡಿಭಾಗದಲ್ಲಿದ್ದಾರೆ. ಭಯೋತ್ಪಾದನೆ ನಿಗ್ರಹದಲ್ಲಿ ಪಾಕಿಸ್ತಾನ ಈಗ ಸಕ್ರಿಯವಾಗಿದೆ. ಜಾಗತಿಕ ಮಟ್ಟದಲ್ಲಿ ಭಯೋತ್ಪಾದನೆ ನಿಗ್ರಹಕ್ಕೆ ಪ್ರಮುಖ ಪಾಲುದಾರ ರಾಷ್ಟ್ರವಾಗಲಿದೆ' ಎಂದು ಅಭಿಪ‍್ರಾಯಪಟ್ಟಿದ್ದಾರೆ.




