ತಿರುವನಂತಪುರ: ಕೇರಳದ ವಯನಾಡು ಜಿಲ್ಲೆಯ ಮುಂಡಕ್ಕೈ, ಚೂರಲ್‌ಮಲದಲ್ಲಿ 200ಕ್ಕೂ ಹೆಚ್ಚು ಜನರು ಸಾವಿಗೆ ಕಾರಣವಾಗಿದ್ದ ಮಾರಕ ಭೂಕುಸಿತ ಸಂಭವಿಸಿ ಒಂದು ವರ್ಷ ಕಳೆಯುವ ಮುನ್ನವೇ ಇದೇ ಪ್ರದೇಶಗಳಲ್ಲಿ ಕಳೆದ 24 ಗಂಟೆಗಳಿಂದ ಭಾರಿ ಮಳೆ ಸುರಿಯುತ್ತಿದ್ದು, ಮತ್ತೆ ಪ್ರವಾಹ, ಭೂಕುಸಿತ ಸಂಭವಿಸುವ ಭೀತಿ ಎದುರಾಗಿದೆ.
ಚೂರಲ್‌ಮಲ ನದಿಯಲ್ಲಿ ಭಾರಿ ಪ್ರಮಾಣದ ನೀರು ಹರಿಯುತ್ತಿದ್ದು, ನವೀಕರಣ ಕಾಮಗಾರಿಗಳಿಗಾಗಿ ನದಿ ದಂಡೆಯಲ್ಲಿ ಸಂಗ್ರಹಿಸಲಾದ ಮಣ್ಣು ಕೊಚ್ಚಿಹೋಗಿದೆ. ಅಟ್ಟಮಾಲ ರಸ್ತೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ನೀರು ನುಗ್ಗಿದೆ.
ಪಂಚಿರಿಮಟ್ಟಂ ಬಳಿ ಅರಣ್ಯ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಆದಾಗ್ಯೂ, ಭೂಕುಸಿತದ ಬಗ್ಗೆ ಖಚಿತತೆ ಇಲ್ಲ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಅಧಿಕಾರಿಗಳು ಹೇಳಿದ್ದಾರೆ.
ಬೆಟ್ಟಗಳ ಮೇಲೆ ವ್ಯಾಪಕ ಮಳೆಯಾಗುತ್ತಿರುವುದು ಹಠಾತ್ ಪ್ರವಾಹಕ್ಕೆ ಕಾರಣವಾಗಿದೆ. ಆದಾಗ್ಯೂ, ತಕ್ಷಣಕ್ಕೆ ಯಾವುದೇ ಸಾವು-ನೋವು ವರದಿಯಾಗಿಲ್ಲ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಬಿನಿ ನದಿಯ ಕೆಳಭಾಗದಲ್ಲಿ ಮಾನಂತವಾಡಿ ಮತ್ತು ಪನಮರಂನಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಬಾಣಾಸುರ ಅಣೆಕಟ್ಟು ಭರ್ತಿಯಾಗುತ್ತಿರುವುದರಿಂದ ಹತ್ತಿರದ ಪ್ರದೇಶಗಳಿಗೆ ರೆಡ್ ಅಲರ್ಟ್ ಜಾರಿ ಮಾಡಲಾಗಿದೆ.
ವಯನಾಡು, ತಿರುವನಂತಪುರ, ಕೊಲ್ಲಂ ಮತ್ತು ಆಲಪ್ಪುಳ ಸೇರಿದಂತೆ 11 ಜಿಲ್ಲೆಗಳಲ್ಲಿ ಬಿರುಗಾಳಿ ಸಮೇತ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
2024ರ ಜುಲೈನಲ್ಲಿ ಸಂಭವಿಸಿದ್ದ ಭೂಕುಸಿತದಿಂದಾಗಿ ಅನೇಕರು ಮನೆಗಳನ್ನು ಕಳೆದುಕೊಂಡಿದ್ದರು. ಜನರ ಸಾವು-ನೋವಿಗೆ ಕಾರಣವಾಗಿದ್ದ ವಿಪತ್ತು ಮತ್ತೆ ಮರುಕಳಿಸುತ್ತದೆಯೋ ಎಂಬ ಆತಂಕ ಸ್ಥಳೀಯರದ್ದು.




