HEALTH TIPS

127 ವರ್ಷಗಳ ನಂತರ ಭಾರತಕ್ಕೆ ಮರಳಿದ ಬುದ್ಧನ ಪಿಪ್ರಾಹವಾ ಅವಶೇಷ: ಪ್ರಧಾನಿ ಮೋದಿ

ನವದೆಹಲಿ: 127 ವರ್ಷಗಳ ನಂತರ ಭಗವಾನ್ ಬುದ್ಧನ ಪವಿತ್ರ ಪಿಪ್ರಾಹವಾ ಅವಶೇಷಗಳನ್ನು ಭಾರತಕ್ಕೆ ಮರಳಿ ತರಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದರು.

ಈ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ಇಂದು ನಮ್ಮ ಸಾಂಸ್ಕೃತಿಕ ಪರಂಪರೆಗೆ ಸಂತಸದ ದಿನ ಎಂದು ಹೇಳಿದ್ದಾರೆ.

'ಭಗವಾನ್ ಬುದ್ಧನ ಪವಿತ್ರ ಪಿಪ್ರಾಹವಾ ಅವಶೇಷಗಳು 127 ವರ್ಷಗಳ ನಂತರ ಭಾರತಕ್ಕೆ ಮರಳಿರುವುದು ಪ್ರತಿಯೊಬ್ಬ ದೇಶವಾಸಿಗೂ ಹೆಮ್ಮೆ ತಂದಿದೆ. ಈ ಪವಿತ್ರ ಅವಶೇಷಗಳು ಭಗವಾನ್ ಬುದ್ಧ ಮತ್ತು ಅವರ ಉದಾತ್ತ ಬೋಧನೆಗಳೊಂದಿಗೆ ಭಾರತದ ನಿಕಟ ಸಂಬಂಧವನ್ನು ಎತ್ತಿ ತೋರಿಸುತ್ತವೆ. ಇದು ನಮ್ಮ ಅದ್ಭುತ ಸಂಸ್ಕೃತಿಯ ವಿವಿಧ ಅಂಶಗಳನ್ನು ಸಂರಕ್ಷಿಸುವ ನಮ್ಮ ಬದ್ಧತೆಯನ್ನು ವಿವರಿಸಿದೆ' ಎಂದು ಅವರು ಹೇಳಿದ್ದಾರೆ.

'ಪಿಪ್ರಾಹವಾ ಅವಶೇಷಗಳನ್ನು ಈ ವರ್ಷದ ಆರಂಭದಲ್ಲಿ ಅಂತರರಾಷ್ಟ್ರೀಯ ಹರಾಜಿನಲ್ಲಿ ಇಡಲಾಗಿತ್ತು. ಇದನ್ನು ಮರಳಿ ತರುವಲ್ಲಿ ನಮ್ಮ ಸರ್ಕಾರ ಕೆಲಸ ಮಾಡಿದೆ. ಈ ಪ್ರಯತ್ನದಲ್ಲಿ ಭಾಗಿಯಾಗಿರುವ ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ' ಎಂದು ತಿಳಿಸಿದ್ದಾರೆ.

ಏನಿದು ಪಿಪ್ರಾಹವಾ ಅವಶೇಷ?

1898 ರಲ್ಲಿ ಭಾರತ-ನೇಪಾಳ ಗಡಿಯ ಸಮೀಪವಿರುವ ಉತ್ತರ ಪ್ರದೇಶದ ಪಿಪ್ರಾಹವಾದಲ್ಲಿ ಪ್ರಾಚೀನ ಬೌದ್ಧ ಸ್ತೂಪದ ಉತ್ಖನನದ ಸಮಯದಲ್ಲಿ ಈ ಅವಶೇಷಗಳನ್ನು ಹೊರತೆಗೆಯಲಾಗಿತ್ತು ಎಂದು ಪಿಪ್ರಾಹವಾ.ಕಾಮ್‌ ವೆಬ್‌ಸೈಟ್‌ ತಿಳಿಸಿದೆ.

ಅಲ್ಲಿ ಸಿಕ್ಕಿದ್ದ ಅವಶೇಷದಲ್ಲಿ ಗೌತಮ ಬುದ್ಧ ಅವರದ್ದು ಎಂದು ನಂಬಲಾದ ಮೂಳೆಯ ತುಣುಕುಗಳು, ಸೋಪ್‌ಸ್ಟೋನ್, ಸ್ಫಟಿಕದ ಪೆಟ್ಟಿಗೆಗಳು, ಮರಳುಗಲ್ಲಿನ ಪಾತ್ರೆ, ಚಿನ್ನದ ಆಭರಣಗಳು ಮತ್ತು ರತ್ನದ ಕಲ್ಲುಗಳು ಇದ್ದವು ಎಂದು ಅದು ಹೇಳಿದೆ.

'ಮೂಳೆ ಅವಶೇಷಗಳನ್ನು ವಿಶ್ವದ ಬೌದ್ಧ ಅನುಯಾಯಿಗಳಿಗೆ ವಿತರಿಸಲು ಸಿಯಾಮ್ (ಥೈಲ್ಯಾಂಡ್) ರಾಜನಿಗೆ ನೀಡಲಾಯಿತು' ಎಂದು ಹೇಳಿದೆ.

ಅವಶೇಷಗಳನ್ನು ಹೊಂದಿದ್ದ ದೊಡ್ಡ ಕಲ್ಲಿನ ಪಾತ್ರೆಯನ್ನು ಕೋಲ್ಕತ್ತದ ಭಾರತೀಯ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕಿಡಲಾಗಿದೆ ಎಂದು ಮಾಹಿತಿ ನೀಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries