ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ ಸಂಸ್ಥೆ ನಾಳೆಯಿಂದ (ಜುಲೈ 15, ಮಂಗಳವಾರ) ಯುಪಿಐ ಟ್ರಾನ್ಸಾಕ್ಷನ್ಸ್ ಸಂಬಂಧ ಪರಿಷ್ಕೃತ ಚಾರ್ಜ್ಬ್ಯಾಕ್ ನಿಯಮಗಳನ್ನು (UPI chargeback request rule) ಜಾರಿಗೆ ತರುತ್ತಿದೆ. ಈಗ ಗ್ರಾಹಕರಿಗೆ ಪಾವತಿ ಸಂಬಂಧದ ವ್ಯಾಜ್ಯಗಳಿಗೆ ಬೇಗ ಪರಿಹಾರ ಸಿಗುತ್ತದೆ.
ಯುಪಿಐನಲ್ಲಿ ಹಣ ಕಳುಹಿಸಿದಾಗ ಬ್ಯಾಂಕ್ ಅಕೌಂಟ್ನಿಂದ ಹಣ ಕಟ್ ಆಗಿಯೂ ವಹಿವಾಟು ವಿಫಲವಾದ ಪ್ರಕರಣಗಳಿಗೆ ಸಂಬಂಧಿಸಿದ ನಿಯಮ ಇದು. ಹೊಸ ನಿಯಮದಿಂದ ಇನ್ಮುಂದೆ ನಿಮಗೆ ಬೇಗನೇ ರೀಫಂಡ್ ಸಿಗುತ್ತದೆ.
ಏನಿದು ಚಾರ್ಜ್ಬ್ಯಾಕ್?
ಯುಪಿಐ ಬಳಕೆದಾರರು ಇನ್ನೊಬ್ಬ ವ್ಯಕ್ತಿಗೆ ಅಥವಾ ಬ್ಯುಸಿನೆಸ್ಗೆ ಹಣ ಕಳುಹಿಸಿದಾಗ, ಬ್ಯಾಂಕ್ ಅಕೌಂಟ್ನಿಂದ ಹಣ ಕಡಿತಗೊಂಡರೂ ತಲುಪಬೇಕಾದವರಿಗೆ ಆ ಹಣ ತಲುಪದೇ ಹೋಗಬಹುದು. ಇಂಥ ನಿದರ್ಶನಗಳು ಬಹಳಷ್ಟಿವೆ. ಟ್ರಾನ್ಸಾಕ್ಷನ್ ಫೇಲ್ಡ್ ಎಂದು ಅಂತ್ಯಗೊಳ್ಳುವ ವಹಿವಾಟೂ ಸಾಕಷ್ಟಾಗುತ್ತವೆ. ಬ್ಯಾಂಕ್ ಖಾತೆಯಿಂದ ಕಡಿತಗೊಂಡ ಹಣವನ್ನು ರೀಫಂಡ್ ಮಾಡುವಂತೆ ಚಾರ್ಜ್ಬ್ಯಾಕ್ ರಿಕ್ವೆಸ್ಟ್ ಮೂಲಕ ಮನವಿ ಸಲ್ಲಿಸಬಹುದು.
ಹಿಂದೆ ಬಳಕೆದಾರರು ಚಾರ್ಜ್ಬ್ಯಾಕ್ ರಿಕ್ವೆಸ್ಟ್ ಎತ್ತಿದಾಗ ಅದಕ್ಕೆ ಪರಿಹಾರ ಸಿಗಲು ಐದಾರು ದಿನಗಳಾಗುತ್ತಿದ್ದುವು. ಈಗ ಒಂದು ಅಥವಾ ಎರಡು ದಿನದೊಳಗೆ ಪರಿಹಾರ ಸಿಗುವಂತೆ ನಿಯಮ ಮಾಡಲಾಗಿದೆ. ಚಾರ್ಜ್ಬ್ಯಾಕ್ ರಿಕ್ವೆಸ್ಟ್ ಬಂದಾಗ ಬ್ಯಾಂಕುಗಳು ಈ ಮೊದಲು ಯುಪಿಐ ರೆಫರೆನ್ಸ್ ಕಂಪ್ಲೇಂಟ್ ಸಿಸ್ಟಂ ಮೂಲಕ ವೈಟ್ಲಿಸ್ಟ್ ಮಾಡುವಂತೆ ಎನ್ಪಿಸಿಐಗೆ ಮನವಿ ಮಾಡಬೇಕಿತ್ತು. ಒಟ್ಟಾರೆ ಪ್ರಕ್ರಿಯೆಯಲ್ಲಿ ಈ ಕ್ರಮವನ್ನು ಕೈಬಿಡಲಾಗುತ್ತಿದೆ. ಬ್ಯಾಂಕುಗಳು ನೇರವಾಗಿ ಇದನ್ನು ನಿರ್ವಹಿಸಲು ಸ್ವತಂತ್ರವಾಗಿರುತ್ತವೆ.
ವ್ಯಕ್ತಿಗೆ ಹಣ ರವಾನೆಯಾಗಲು ವಿಫಲವಾದಾಗ ರೀಫಂಡ್ ಪಡೆಯಲು ಬ್ಯಾಂಕುಗಳಿಗೆ ಒಂದು ದಿನ ಕಾಲಾವಕಾಶ ಕೊಡಲಾಗುತ್ತದೆ. ಇವತ್ತು ನೀವು ದೂರು ಕೊಟ್ಟರೆ ನಾಳೆಯೊಳಗೆ ಈ ವ್ಯಾಜ್ಯ ಬಗೆಹರಿಯಬೇಕು. ವರ್ತಕರಿಗೆ ಮಾಡಿದ ಪಾವತಿ ವಿಫಲವಾದಾಗ ರೀಫಂಡ್ ಕೊಡಲು ಎರಡು ದಿನ ಕಾಲಾವಕಾಶ ಕೊಡಲಾಗುತ್ತದೆ.
ಎನ್ಪಿಸಿಐ ಮಾಡಿದ ಈ ನಿಯಮವು ಯುಪಿಐ ಬಳಕೆದಾರರಿಗೆ ಅನುಕೂಲ ತರಲಿದೆ. ಕೆಲ ಅನಗತ್ಯ ಕ್ರಮ ರದ್ದುಪಡಿಸಿರುವುದರಿಂದ ಬ್ಯಾಂಕುಗಳೂ ಕೂಡ ತ್ವರಿತವಾಗಿ ವ್ಯಾಜ್ಯಕ್ಕೆ ಪರಿಹಾರ ಹುಡುಕಲು ಸಾಧ್ಯವಾಗುತ್ತದೆ.




