ನವದೆಹಲಿ: ಬ್ಯಾಂಕಿಂಗ್, ವಿಮೆ, ಅಂಚೆ, ಕಲ್ಲಿದ್ದಲು ಗಣಿಗಾರಿಕೆ, ಹೆದ್ದಾರಿಗಳು ಮತ್ತು ನಿರ್ಮಾಣ ವಲಯದಲ್ಲಿ ಕೆಲಸ ಮಾಡುತ್ತಿರುವ 25 ಕೋಟಿಗೂ ಹೆಚ್ಚು ಕಾರ್ಮಿಕರು ಇಂದು ಬುಧವಾರ ಸಾರ್ವತ್ರಿಕ ಮುಷ್ಕರ ನಡೆಸುತ್ತಿದ್ದು, ದೇಶದಾದ್ಯಂತ ವಿವಿಧ ಸೇವೆಗಳಲ್ಲಿ ವ್ಯತ್ಯಯವಾಗುವ ಸಂಭವ ಇದೆ.
ಕಾರ್ಮಿಕರ ಹತ್ತು ಸಂಘಟನೆಗಳು ಮತ್ತು ಅವುಗಳ ಸಹವರ್ತಿ ಸಂಘಟನೆಗಳ ವೇದಿಕೆಯು, 'ಕೇಂದ್ರ ಸರ್ಕಾರವು ಕಾರ್ಮಿಕ ವಿರೋಧಿ, ರೈತ ವಿರೋಧಿ, ರಾಷ್ಟ್ರ ವಿರೋಧಿ ಮತ್ತು ಕಾರ್ಪೊರೇಟ್ ಪರವಾದ ನೀತಿಗಳನ್ನು ಅನುಸರಿಸುತ್ತಿದೆ' ಎಂದು ಆರೋಪಿಸಿದೆ. ಇದನ್ನು ವಿರೋಧಿಸಿ ವೇದಿಕೆಯು ಭಾರತ್ ಬಂದ್‌ಗೆ ಕರೆ ನೀಡಿದೆ.
'ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ಭಾರಿ ಯಶಸ್ಸು ದೊರಕಿಸಿಕೊಡಬೇಕು'
ಎಂದು ವೇದಿಕೆಯು ಕರೆ ನೀಡಿದೆ. ಅರ್ಥ ವ್ಯವಸ್ಥೆಯ ಸಂಘಟಿತ ಹಾಗೂ ಅಸಂಘಟಿತ ವಲಯಗಳಲ್ಲಿ ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಸಿದ್ಧತೆ ನಡೆಸಿವೆ ಎಂದು ತಿಳಿಸಿದೆ.
'ಮುಷ್ಕರದಲ್ಲಿ 25 ಕೋಟಿಗೂ ಹೆಚ್ಚು ಕಾರ್ಮಿಕರು ಭಾಗಿಯಾಗುವ ನಿರೀಕ್ಷೆ ಇದೆ. ರೈತರು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಕಾರ್ಮಿಕರು ಕೂಡ ಪ್ರತಿಭಟನೆಯಲ್ಲಿ
ಭಾಗಿಯಾಗಲಿದ್ದಾರೆ' ಎಂದು ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ಅಮರ್ಜೀತ್ ಕೌರ್ ಅವರು ಹೇಳಿದ್ದಾರೆ.
ವೇದಿಕೆಯು 17 ಅಂಶಗಳ ಬೇಡಿಕೆಗಳನ್ನು ಕೇಂದ್ರ ಕಾರ್ಮಿಕ ಸಚಿವ ಮನಸುಖ್ ಮಾಂಡವೀಯ ಅವರಿಗೆ ಕಳೆದ ವರ್ಷ ಸಲ್ಲಿಸಿತ್ತು.
ಕೇಂದ್ರ ಸರ್ಕಾರವು ವಾರ್ಷಿಕ ಕಾರ್ಮಿಕ ಸಮಾವೇಶವನ್ನು 10 ವರ್ಷಗಳಿಂದ ಆಯೋಜಿಸಿಲ್ಲ. ಕಾರ್ಮಿಕ ವರ್ಗದ ಹಿತಕ್ಕೆ ವಿರುದ್ಧವಾದ ತೀರ್ಮಾನ ಗಳನ್ನು ಸರ್ಕಾರ ತೆಗೆದುಕೊಳ್ಳುತ್ತಿದೆ ಎಂದು ವೇದಿಕೆ ಆರೋಪಿಸಿದೆ.
ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳು ಮತ್ತಷ್ಟು ನಿರುದ್ಯೋಗಕ್ಕೆ, ಅಗತ್ಯ ವಸ್ತುಗಳ ಬೆಲೆ ಹೆಚ್ಚಳಕ್ಕೆ, ವೇತನ ಇಳಿಕೆಗೆ, ಸಾಮಾಜಿಕ ವಲಯಗಳ ಮೇಲಿನ ವೆಚ್ಚ ಇಳಿಕೆಗೆ ಕಾರಣವಾಗುತ್ತಿವೆ. ಇವೆಲ್ಲವೂ ಅಸಮಾನತೆಯನ್ನು ಇನ್ನಷ್ಟು ಹೆಚ್ಚಿಸುತ್ತಿವೆ ಎಂದು ಅದು ಹೇಳಿದೆ.




