ಹೈದರಾಬಾದ್: ಆನ್‌ಲೈನ್ ಬೆಟ್ಟಿಂಗ್ ಆಯಪ್‌ಗಳ ವಿರುದ್ಧದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ನಟರಾದ ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್ ಸೇರಿ 29 ಸೆಲೆಬ್ರಿಟಿಗಳ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಪ್ರಕರಣ ದಾಖಲಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ನಟರಾದ ಮಂಚು ಲಕ್ಷ್ಮಿ, ನಿಧಿ ಅಗರ್ವಾಲ್, ಪ್ರಣೀತಾ ಸುಭಾಶ್, ಅನನ್ಯಾ ನಾಗಲ್ಲಾ, ಟಿ.ವಿ ನಿರೂಪಕಿ ಶ್ರೀಮುಖಿ ಹಾಗೂ ತೆಲಂಗಾಣದ ಸಾಮಾಜಿಕ ಜಾಲತಾಣಗಳ ಇನ್‌ಫ್ಲುಯೆನ್ಸರ್‌ಗಳು, ಯುಟ್ಯೂಬರ್‌ಗಳ ಹೆಸರನ್ನೂ ಪ್ರಕರಣದಲ್ಲಿ ಹೆಸರಿಸಲಾಗಿದೆ.
ಈ ಆಯಪ್‌ಗಳು ಅಕ್ರಮ ಬೆಟ್ಟಿಂಗ್ ಮತ್ತು ಜೂಜಾಟದಿಂದ ಕಾನೂನು ಬಾಹಿರವಾಗಿ ಕೋಟ್ಯಂತರ ರೂಪಾಯಿ ಗಳಿಸಿವೆ ಎಂಬ ಆರೋಪವಿದೆ ಎಂದು ಮೂಲಗಳು ಹೇಳಿವೆ.
ರಾಜ್ಯದ ಐದು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳನ್ನು ಗಮನದಲ್ಲಿಟ್ಟುಕೊಂಡು ಜಾರಿ ನಿರ್ದೇಶನಾಲಯವು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಪ್ರಕರಣ ದಾಖಲು ಮಾಡಿದೆ.
ಯಾವ ಆಯಪ್‌ಗಳು
ಆನ್‌ಲೈನ್ ಬೆಟ್ಟಿಂಗ್ ಆಯಪ್‌ಗಳಾದ 'ಜಂಗ್ಲಿ ರಮ್ಮಿ', 'ಜೀತ್‌ವಿನ್', 'ಲೋಟಸ್365' ಇತ್ಯಾದಿ ಆನ್‌ಲೈನ್ ಬೆಟ್ಟಿಂಗ್ ಅಪ್ಲಿಕೇಷನ್‌ಗಳನ್ನು ಅನುಮೋದಿಸಿ, ಅವುಗಳ ಪರ ಈ ಸೆಲೆಬ್ರಿಟಿಗಳು ಪ್ರಚಾರ ನಡೆಸಿದ್ದಾರೆ. ಇದಕ್ಕಾಗಿ ಅವರು ಅಪಾರ ಹಣ ಪಡೆದಿದ್ದಾರೆ ಎಂಬ ಶಂಕೆಯಿದೆ ಎಂದು ಮೂಲಗಳು ತಿಳಿಸಿವೆ.
'ಈ ಆಯಪ್‌ಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬುದು ಗೊತ್ತಿಲ್ಲ. ಅಲ್ಲದೆ ಅವುಗಳ ಕಾನೂನು ಬಾಹಿರ ಬೆಟ್ಟಿಂಗ್ ಚಟುವಟಿಕೆಗಳಲ್ಲಿ ನಾವು ಪಾಲ್ಗೊಂಡಿಲ್ಲ' ಎಂಬುದಾಗಿ ಪ್ರಕರಣದಲ್ಲಿ ಹೆಸರಿಸಲಾಗಿರುವ ಕೆಲ ನಟರು ಈ ಹಿಂದೆಯೇ ಹೇಳಿಕೆ ನೀಡಿದ್ದರು ಎಂದು ಮೂಲಗಳು ಹೇಳಿವೆ.
ಜಾರಿ ನಿರ್ದೇಶನಾಲಯವು ಮುಂದಿನ ದಿನಗಳಲ್ಲಿ ಈ ಸೆಲೆಬ್ರಿಟಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡು ವಿಚಾರಣೆ ನಡೆಸಲಿದೆ.
'ಈ ಪ್ರಕರಣ ಸಂಬಂಧ ಸಮಗ್ರ ತನಿಖೆ ಆರಂಭವಾಗಿದ್ದು, ಈ ಆಯಪ್‌ಗಳು ಅಕ್ರಮವಾಗಿ ಗಳಿಸಿರುವ ಹಣ ಎಷ್ಟು ಎಂಬುದರ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಸೆಲೆಬ್ರಿಟಿಗಳ ಹೇಳಿಕೆ ದಾಖಲಿಸಿದ ಬಳಿಕ ಪ್ರಕರಣದಲ್ಲಿ ಅವರ ಪಾತ್ರವನ್ನು ನಿರ್ಧರಿಸಲಾಗುತ್ತದೆ' ಎಂದು ಮೂಲಗಳು ಹೇಳಿವೆ.




