HEALTH TIPS

ಔಷಧ ಕಾರ್ಖಾನೆ ಸ್ಫೋಟ: ಹಳೆಯ ಯಂತ್ರ ಬದಲಿಸದ ಕಂಪನಿ; ಮೃತರ ಸಂಖ್ಯೆ 40ಕ್ಕೆ ಏರಿಕೆ

ಸಂಗಾರೆಡ್ಡಿ : ಇಲ್ಲಿನ ಸಿಗಾಚಿ ಫಾರ್ಮಾ ಕಂಪನಿಯು ಹಳೆಯ ಯಂತ್ರೋಪಕರಣಗಳನ್ನೇ ಬಳಸಿ ಕಾರ್ಯ ನಿರ್ವಹಿಸುತ್ತಿತ್ತು ಎಂದು ಕಂಪನಿಯ ಆಡಳಿತ ಮಂಡಳಿಯ ವಿರುದ್ದ ದಾಖಲಾದ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಪಾಶಮೈಲಾರಂ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಯ ರಿಯಾಕ್ಟರ್‌ನಲ್ಲಿ ಸೋಮವಾರ ಸ್ಫೋಟ ಸಂಭವಿಸಿತ್ತು.

ದುರಂತದಲ್ಲಿ 40 ಮಂದಿ ಮೃತಪಟ್ಟಿದ್ದಾರೆ ಎಂದು ಕಂಪನಿ ಬುಧವಾರ ಹೇಳಿದೆ. ಆದರೆ ಜಿಲ್ಲಾಡಳಿತವು ಮೃತರ ಸಂಖ್ಯೆ 38 ಎಂದು ತಿಳಿಸಿದೆ.

ಸಂತ್ರಸ್ತರಲ್ಲಿ ಒಬ್ಬರ ಕುಟುಂಬದ ಸದಸ್ಯರು ನೀಡಿದ ದೂರಿನಂತೆ ಸಂಗಾರೆಡ್ಡಿ ಪೊಲೀಸರು ಕಾರ್ಖಾನೆಯ ಆಡಳಿತ ಮಂಡಳಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್‌) ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿದ್ದರು.

'ಯಂತ್ರೋಪಕರಣಗಳು ತುಂಬಾ ಹಳೆಯದಾಗಿದ್ದು, ಅವುಗಳನ್ನೇ ಬಳಸಿದರೆ ಅಪಾಯ ಉಂಟಾಗುವ ಎಲ್ಲ ಸಾಧ್ಯತೆಗಳಿವೆ ಎಂದು ದೂರುದಾರರ ತಂದೆ ಮತ್ತು ಸಿಗಾಚಿ ಕಂಪನಿಯ ಇತರ ಉದ್ಯೋಗಿಗಳು ಕಂಪನಿಯ ಆಡಳಿತ ಮಂಡಳಿಗೆ ಹಲವು ಬಾರಿ ಮನವಿ ಮಾಡಿದ್ದರು' ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

'ಆದರೆ ಉದ್ಯೋಗಿಗಳ ಮನವಿಗೆ ಸ್ಪಂದಿಸದ ಆಡಳಿತ ಮಂಡಳಿಯು ಹಳೆಯ ಯಂತ್ರಗಳನ್ನೇ ಬಳಸುವುದನ್ನು ಮುಂದುವರಿಸಿತು. ಇದರ ಪರಿಣಾಮ ಸ್ಫೋಟ ಸಂಭವಿಸಿದೆ' ಎಂದು ಹೇಳಿದೆ. ಯಶವಂತ್ ರಾಜನಾಲ ಎಂಬವರು ಕಂಪನಿಯ ಆಡಳಿತ ಮಂಡಳಿ ವಿರುದ್ಧ ದೂರು ನೀಡಿದ್ದಾರೆ. ಯಶವಂತ್‌ ಅವರ ತಂದೆ ರಾಜನಾಲ ವೆಂಕಟ ಜಗನ್‌ ಮೋಹನ್‌ ಅವರು ಸ್ಫೋಟದಲ್ಲಿ ಮೃತಪಟ್ಟಿದ್ದಾರೆ. ಅವರು 20 ವರ್ಷಗಳಿಂದಲೂ ಇಲ್ಲಿ ಕೆಲಸ ಮಾಡುತ್ತಿದ್ದರು.

ಕಂಪನಿಯು ಅಗ್ನಿಶಾಮಕ ಇಲಾಖೆಯಿಂದ ನಿರಾಕ್ಷೇಪಣ ಪ್ರಮಾಣಪತ್ರ (ಎನ್‌ಒಸಿ) ಪಡೆದಿರಲಿಲ್ಲ ಎಂದು ತೆಲಂಗಾಣ ಅಗ್ನಿಶಾಮಕ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 'ಕಂಪನಿಯು ಎನ್‌ಒಸಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿರಲಿಲ್ಲ. ಆದ್ದರಿಂದ ಪ್ರಮಾಣಪತ್ರ ನೀಡಿರಲಿಲ್ಲ' ಎಂದಿದ್ದಾರೆ.

ಸಮಿತಿ ರಚನೆ: ದುರಂತದ ಕಾರಣ ಪತ್ತೆ ಹಚ್ಚಲು ತೆಲಂಗಾಣ ಸರ್ಕಾರ ಬುಧವಾರ ತಜ್ಞರ ಸಮಿತಿಯನ್ನು ನೇಮಿಸಿದೆ. ಸಮಿತಿಯು ಒಂದು ತಿಂಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.

₹ 1 ಕೋಟಿ ಪರಿಹಾರ ಘೋಷಣೆ

ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹1 ಕೋಟಿ ಪರಿಹಾರ ನೀಡುವುದಾಗಿ ಸಿಗಾಚಿ ಕಂಪನಿಯ ಆಡಳಿತ ಮಂಡಳಿ ಬುಧವಾರ ಘೋಷಿಸಿದೆ. 'ಸ್ಫೋಟದಲ್ಲಿ ನಾವು 40 ಸಿಬ್ಬಂದಿಯನ್ನು ಕಳೆದುಕೊಂಡಿದ್ದೇವೆ. 33 ಮಂದಿ ಗಾಯಗೊಂಡಿದ್ದಾರೆ. ಮೃತರ ಕುಟುಂಬಗಳಿಗೆ ತಲಾ ₹1 ಕೋಟಿ ಪರಿಹಾರ ನೀಡಲಾಗುವುದು. ಗಾಯಾಳುಗಳ ಚಿಕಿತ್ಸೆಯ ವೆಚ್ಚವನ್ನು ಕಂಪನಿಯೇ ಭರಿಸಲಿದೆ' ಎಂದು ಪ್ರಕಟಣೆ ತಿಳಿಸಿದೆ. ಕಂಪನಿಯಿಂದ ತಲಾ ₹1 ಕೋಟಿ ಪರಿಹಾರ ಒದಗಿಸಲು ಕ್ರಮವಹಿಸಲಾಗುವುದು ಎಂದು ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ ರೆಡ್ಡಿ ಮಂಗಳವಾರ ಹೇಳಿದ್ದರು.

ಅಧಿಕಾರಿಗಳ ಸಾವು: ತನಿಖೆಗೆ ಹಿನ್ನಡೆ?

ಕಂಪನಿಯ ಮೂವರು ಅಧಿಕಾರಿಗಳು ದುರಂತದಲ್ಲಿ ಮೃತಪಟ್ಟಿರುವುದರಿಂದ ಪ್ರಕರಣದ ತನಿಖೆಗೆ ಹಿನ್ನಡೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. 'ಕಾರ್ಖಾನೆಯ ವ್ಯವಸ್ಥಾಪಕ ಉಪ ಪ್ರಧಾನ ವ್ಯವಸ್ಥಾ‍ಪಕ (ಉತ್ಪಾದನೆ) ಮತ್ತು ನಿರ್ವಾಹಕರು ಮೃತಪಟ್ಟಿದ್ದಾರೆ. ಇದರಿಂದ ದುರಂತದ ಬಗ್ಗೆ ನಿರ್ಣಾಯಕ ಮಾಹಿತಿ ಕಲೆಹಾಕುವ ಪ್ರಕ್ರಿಯೆಗೆ ಹಿನ್ನಡೆಯಾಗಿದೆ' ಎಂದು ತನಿಖಾ ತಂಡದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries