ಚೆನ್ನೈ: ಚೆನ್ನೈನಿಂದ ಜೋಲಾರ್‌ಪೇಟೆಗೆ ಇಂಧನ ಸಾಗಿಸುತ್ತಿದ್ದ ಗೂಡ್ಸ್ ರೈಲಿನ ಐದು ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಗಳೂರು, ಮೈಸೂರು ಮತ್ತು ಕೊಯಮತ್ತೂರು ನಡುವೆ ಸಂಚರಿಸುವ ಪ್ರೀಮಿಯಂ ವಂದೇ ಭಾರತ್, ಶತಾಬ್ದಿ ಎಕ್ಸ್‌ಪ್ರೆಸ್ ಸೇರಿದಂತೆ ಕನಿಷ್ಠ ಎಂಟು ರೈಲುಗಳ ಸಂಚಾರ ರದ್ದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಿರುವಳ್ಳೂರು ರೈಲು ನಿಲ್ದಾಣದ ಬಳಿ ನಿನ್ನೆ (ಭಾನುವಾರ) ಬೆಳಿಗ್ಗೆ 5.30ರ ಸುಮಾರಿಗೆ ಈ ಘಟನೆ ನಡೆದಿದ್ದು, ರೈಲು ನಿಲ್ದಾಣದಲ್ಲಿ ದಟ್ಟ ಹೊಗೆ ಆವರಿಸಿಕೊಂಡಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿದಂತೆ ಇತರೆ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ರೈಲು ಸಂಚಾರ ಆದಷ್ಟು ಬೇಗ ಪುನರಾರಂಭಗೊಳ್ಳುತ್ತದೆ ಎಂದು ದಕ್ಷಿಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ಮುನ್ನೆಚ್ಚರಿಕೆ ಮತ್ತು ಸುರಕ್ಷತಾ ಕ್ರಮವಾಗಿ ಚೆನ್ನೈ-ಅರಕ್ಕೋಣಂ ವಿಭಾಗದಲ್ಲಿನ ಸ್ಥಳೀಯ ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ ಸರಕು ಸಾಗಣೆ ರೈಲಿನ ಮೂರು ಬೋಗಿಗಳು ಹಳಿತಪ್ಪಿವೆ. ಇದರಿಂದಾಗಿ ಇಂಧನ ಸೋರಿಕೆಯಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.




