ವಾಷಿಂಗ್ಟನ್: ಖಾಲಿಸ್ತಾನಿ ಉಗ್ರ ಹಾಗೂ ಪಂಜಾಬ್ ಗ್ಯಾಂಗ್‌ಸ್ಟರ್ ಪವಿತ್ತರ್ ಸಿಂಗ್ ಬಟಾಲ ಸೇರಿದಂತೆ 9 ಉಗ್ರರನ್ನು ಅಮೆರಿಕದ ತನಿಖಾ ಸಂಸ್ಥೆ (ಎಫ್‌ಬಿಐ) ಭಾನುವಾರ ಬಂಧಿಸಿದೆ.
ಬಂಧಿತರ ಪೈಕಿ ಬಟಾಲ ಸೇರಿದಂತೆ ಇತರೆ ಐದು ಜನರು ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ಬೇಕಾಗಿದ್ದರು ಎಂದು ವರದಿಯಾಗಿದೆ.
ನಿಷೇಧಿತ ಭಯೋತ್ಪಾದಕ ಸಂಘಟನೆ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್ (ಬಿಕೆಐ)ನೊಂದಿಗೆ ಬಟಾಲ ಸಂಪರ್ಕ ಹೊಂದಿದ್ದು ಹಲವು ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು ಅವನು ಭಾರತಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕದ ಸ್ಯಾನ್ ಜೋಕ್ವಿನ್ ಕೌಂಟಿಯಲ್ಲಿ ನಡೆದ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಟಾಲ ಹಾಗೂ ಆತನ ಸಹಚರರನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ.
ಬಟಾಲ ಸೇರಿದಂತೆ ದಿಲ್‌ಪ್ರೀತ್ ಸಿಂಗ್, ಅಮೃತ್‌ಪಾಲ್ ಸಿಂಗ್, ಅರ್ಪಿತ್ ಸಿಂಗ್, ಮನ್‌ಪ್ರೀತ್ ರಾಂಧವಾ, ಸರಬ್‌ಜಿತ್ ಸಿಂಗ್, ಗುರ್ತಾಜ್ ಸಿಂಗ್ ಮತ್ತು ವಿಶಾಲ್ ಎಂಬುವವರನ್ನು ಬಂಧಿಸಲಾಗಿದೆ.
ಇವರ ವಿರುದ್ಧ ಅಪಹರಣ, ಅಕ್ರಮ ಬಂಧನ, ಸಾಕ್ಷಿಗೆ ಬೆದರಿಕೆ ಹಾಕುವುದು ಹಾಗೂ ಹಲ್ಲೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಇವರನ್ನು ಸ್ಯಾನ್ ಜೋಕ್ವಿನ್ ಕೌಂಟಿ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.




