HEALTH TIPS

ನಿಮಿಷ ಪ್ರಿಯಾ ‍‍ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಿದ ಶೇಕ್ ಅಬೂಬಕರ್ ಯಾರು?

ಮಲಪ್ಪುರಂ: ಕೇರಳದ ನರ್ಸ್ ನಿಮಿಷ ಪ್ರಿಯಾರನ್ನು ಗಲ್ಲಿಗೇರಿಸಲು ಇನ್ನೇನು ಕೆಲವೇ ಗಂಟೆಗಳು ಬಾಕಿ ಇತ್ತು. ಎಲ್ಲಾ ಪ್ರಯತ್ನಗಳು ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಕೇಂದ್ರ ಸರ್ಕಾರ ಕೈಚೆಲ್ಲಿ ಕುಳಿತಿತ್ತು. ಎಲ್ಲಾ ಭರವಸೆಗಳು ಮುಗಿದಿವೆ, ಪ್ರಾರ್ಥನೆಯೊಂದೇ ದಾರಿ ಎಂದು ಎಲ್ಲರೂ ನಂಬಿದ್ದರು.

ನಾವು ಕ್ರಮಿಸಲು ಸಾಧ್ಯವಾದಷ್ಟು ದೂರ ಸಾಗಿದ್ದೇವೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ತನ್ನ ವ್ಯಾಪ್ತಿಯಲ್ಲಿ ಬರದೇ ಇರುವುದರಿಂದ ಸುಪ್ರೀಂ ಕೋರ್ಟ್‌ಗೂ ಈ ಬಗ್ಗೆ ಹೆಚ್ಚಿನದ್ದೇನು ಮಾಡಲು ಅಸಾಧ್ಯವಾಗಿತ್ತು. ನಿಮಿಷ ‍ಪ್ರಿಯಾಗೆ ಗಲ್ಲು ಶಿಕ್ಷೆ ಖಾತರಿಯಾಗಿತ್ತು.

ಯೆಮನ್‌ನಲ್ಲಿ ಭಾರತ ರಾಯಭಾರ ಕಚೇರಿಯೂ ಇಲ್ಲದಿರುವುದರಿಂದ ರಾಜತಾಂತ್ರಿಕ ಮಾತುಕತೆಗಳ ಮಾರ್ಗವೂ ಸೀಮಿತವಾಗಿತ್ತು. ಸಂತ್ರಸ್ತ ಕುಟುಂಬವನ್ನು ಸಂಪರ್ಕಿಸುವ ಪ್ರಯತ್ನವೂ ವಿಫಲವಾಗಿತ್ತು. ಹೀಗಾಗಿ ನಿಮಿಷ ಪ್ರಿಯಾ ಗಲ್ಲು ಶಿಕ್ಷೆ ಜುಲೈ 16ರಂದೇ ಜಾರಿಯಾಗುವುದು ಖಚಿತವಾಗಿತ್ತು.

ಏತನ್ಮಧ್ಯೆ ಭಾರಿ ಚರ್ಚೆಗೆ ಎಡೆ ಮಾಡಿಕೊಟ್ಟಿದ್ದ ಈ ಪ್ರಕರಣಕ್ಕೆ ಮುಸ್ಲಿಂ ಧಾರ್ಮಿಕ ಗುರು, ಸುನ್ನಿ ನಾಯಕ ಭಾರತದ ಗ್ರ್ಯಾಂಡ್ ಮುಫ್ತಿ ಶೇಕ್ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರ ಮಧ್ಯಪ್ರವೇಶ, ಇಡೀ ಪ್ರಕರಣದ ತಿರುವು ಪಡೆಯಲು ಕಾರಣವಾಯಿತು. ಜುಲೈ 16ರಂದು ಜಾರಿಯಾಗಬೇಕಿದ್ದ ಗಲ್ಲು ಶಿಕ್ಷೆ ಮುಂದೂಡಲಾಗಿದೆ. ಇದರಿಂದ ನಿಮಿಷ ಪ್ರಿಯಾ ಹಾಗೂ ಅವರ ಕುಟುಂಬಸ್ಥರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.

ಶೇಕ್ ಅಬೂಬಕರ್ ಮಾಡಿದ್ದೇನು?

ತನ್ನ ಧಾರ್ಮಿಕ ಸಂಪರ್ಕದ ಮೂಲಕ ಯೆಮನ್‌ನ ಸೂಫಿ ವಿದ್ವಾಂಸರನ್ನು ಸಂಪರ್ಕಿಸಿದ ಎ.ಪಿ ಅಬೂಬಕರ್ ಮುಸ್ಲಿಯಾರ್, ಗಲ್ಲು ಶಿಕ್ಷೆ ಮುಂದೂಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಶಿಕ್ಷೆ ಜಾರಿಯನ್ನು ಮುಂದಿನ ನಿರ್ಧಾರದವರೆಗೆ ಮುಂದೂಡಲಾಗಿದೆ ಎನ್ನುವ ಅಧಿಕೃತ ಪ್ರಕಟಣೆ ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಬಂತು. ಇಡೀ ಮಲಯಾಳಿ ಸಮೂಹವೇ ಸಂಭ್ರಮಿಸಿತು. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆದಿಯಾಗಿ ಪ್ರಮುಖ ನಾಯಕರು ಗ್ರ್ಯಾಂಡ್ ಮುಫ್ತಿಯವರ ಪ್ರಯತ್ನವನ್ನು ಶ್ಲಾಘಿಸಿದರು.

ಶಿಕ್ಷೆ ಜಾರಿ ತಡೆಯಲು ಸಂಘಟಿತ ಪ್ರಯತ್ನ ನಡೆಸಲಾಗುತ್ತಿದೆ ಎಂದು ಭಾರತ ಸರ್ಕಾರ ಹೇಳಿದರೂ, ಎಎನ್‌ಐ ಸುದ್ದಿ ಸಂಸ್ಥೆಯ ಪ್ರಕಾರ, ಮಾತುಕತೆಯ ಬಾಗಿಲುಗಳು ತೆರೆದಿದ್ದೇ ಅಬೂಬಕರ್ ಮುಸ್ಲಿಯಾರ್‌ರವರ ಮಧ್ಯಪ್ರವೇಶದಿಂದ.

ಯೆಮನ್‌ನಲ್ಲಿರುವ ಸೂಫಿ ವಿದ್ವಾಂಸರೊಂದಿಗೆ, ಅದರಲ್ಲೂ ಪ್ರಮುಖ ನೇತಾರ ಶೇಕ್ ಹಬೀಬ್ ಉಮರ್ ಬಿನ್ ಹಫೀಜ್ ಅವರೊಂದಿಗೆ ಇರುವ ತನ್ನ ಸಂಬಂಧ ಬಳಸಿ, ಸಂತ್ರಸ್ತ ಕುಟುಂಬಕ್ಕೆ ಆಪ್ತವಾಗಿರುವ ಪ್ರಮುಖ ಧರ್ಮಗುರುವನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ. ಈ ಹಿಂದೆ ಈ ಸಂಪರ್ಕ ಯಾರಿಂದಲೂ ಸಾಧ್ಯವಾಗಿಲ್ಲ ಎನ್ನುವುದು ಗಮನಾರ್ಹ.

'ನನಗೆ ಸಂತ್ರಸ್ತ ಕುಟುಂಬದ ಬಗ್ಗೆ ಗೊತ್ತಿಲ್ಲ. ಆದರೆ ಯೆಮನ್‌ನಲ್ಲಿರುವ ವಿದ್ವಾಂಸರನ್ನು ನಾನು ಸಂಪರ್ಕಿಸಿದೆ. ಅವರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡರು. ಇಸ್ಲಾಂ ಶಾಂತಿಯ ಧರ್ಮ, ಮಾನವೀಯತೆಗೆ ಇಸ್ಲಾಂ ಭಾರಿ ಪ್ರಾಮುಖ್ಯತೆ ನೀಡುತ್ತದೆ' ಎಂದು ಅಬೂಬಕರ್ ಮಂಗಳವಾರ ಕೋಯಿಕ್ಕೋಡ್‌ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕೊಲೆಗೀಡಾದ ಯೆಮನ್ ಪ್ರಜೆ ತಲಾಲ್ ಅಬ್ದು ಮೆಹ್ದಿಯ ಕುಟುಂಬಸ್ಥರು ಹಾಗೂ ಶೇಖ್ ಹಬೀಬ್ ಉಮರ್ ಅವರ ಪ್ರತಿನಿಧಿಗಳ ನಡುವೆ ಸಭೆ ನಿಗದಿಯಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಮೂಲಗಳ ಪ್ರಕಾರ ಇದೇ ಮೊದಲ ಬಾರಿಗೆ ಮಾತುಕತೆಗೆ ಒಪ್ಪಿದ್ದು, ಅಬೂಬಕರ್ ಮುಸ್ಲಿಯಾರ್‌ರವರ ಮಧ್ಯಪ್ರವೇಶದ ಬಳಿಕವಷ್ಟೇ ಇದು ಸಾಧ್ಯವಾಗಿದೆ.

ಕಳೆದ ಹಲವು ವರ್ಷಗಳಿಂದ ಕುಟುಂಬವನ್ನು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ಆದರೆ ಅಬೂಬಕರ್ ಅವರ ಧಾರ್ಮಿಕ ನಿಲುವು ಹಾಗೂ ಯೆಮನ್‌ನ ಸೂಫಿ ವಿದ್ವಾಂಸರೊಂದಿಗಿನ ಸಂಬಂಧವು ರಾಜತಾಂತ್ರಿಕತೆಯಿಂದ ಮಾಡಲಾಗದ ಕೆಲಸವನ್ನು ಮಾಡಿದೆ.

ಶಿಕ್ಷೆ ಮುಂದೂಡಿಕೆಯಾಗಿರುವುದರ ಬಗ್ಗೆ ಯೆಮನ್‌ನ ವಿದ್ವಾಂಸರ ಅಧಿಕೃತ ‍ಪ್ರಕಟಣೆ ಲಭಿಸಿದ್ದಾಗಿ ಅಬೂಬಕರ್ ಅವರ ಕಚೇರಿ ತಿಳಿಸಿದ್ದು, ಮಾತುಕತೆ ಮುಂದುವರಿಯಲಿದೆ ಎಂದು ಹೇಳಿದೆ.

ಈ ಮಾತುಕತೆಯ ಬಗ್ಗೆ ಪ್ರಧಾನ ಮಂತ್ರಿಗಳ ಕಚೇರಿಗೂ ಮಾಹಿತಿ ನೀಡಿದ್ದು, ಹೆಚ್ಚಿನ ಬೆಂಬಲ ಕೋರಿದ್ದಾಗಿ ಅಬೂಬಕರ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

'ಬ್ಲಡ್ ಮನಿ' ಪಡೆದುಕೊಂಡು ಅಪರಾಧಿಗೆ ಕ್ಷಮೆ ನೀಡುವ ಹಕ್ಕು ಕೊಲೆಯಾದ ವ್ಯಕ್ತಿಯ ಕುಟುಂಬಕ್ಕೆ ಷರಿಯಾ ಕಾನೂನಿನಲ್ಲಿ ಅವಕಾಶ ಇದೆ. ಸದ್ಯದ ಮಾತುಕತೆಗಳು ಆ ನಿಟ್ಟಿನಲ್ಲಿ ಸಾಗುತ್ತಿದ್ದು, ಅಬೂಬಕರ್ ಮುಸ್ಲಿಯಾರ್‌ರವರ ಮಧ್ಯಪ್ರವೇಶ ಇಲ್ಲದೆ ಇವೆಲ್ಲ ಸಾಧ್ಯವಾಗುತ್ತಿರಲಿಲ್ಲ ಎನ್ನುವುದು ವಾಸ್ತವ.

ಅಬೂಬಕರ್ ಮುಸ್ಲಿಯಾರ್‌ಗೆ ಪ್ರಶಂಸೆಗಳ ಮಾಹಾಪೂರ

ನಿಮಿಷ ಪ್ರಿಯಾ ಅವರ ಗಲ್ಲು ಶಿಕ್ಷೆ ಜಾರಿ ಮುಂದೂಡಿದ ಅಧಿಕೃತ ಪ್ರಕಟಣೆ ಹೊರಬೀಳುತ್ತಿದ್ದಂತೆಯೇ ಶೇಕ್ ಅಬೂಬಕರ್ ಅವರಿಗೆ ಪ್ರಶಂಸೆಗಳ ಮಹಾಪೂರವೇ ಹರಿದು ಬಂತು. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ವಿರೋಧ ಪಕ್ಷದ ನಾಯಕ ವಿ.ಡಿ ಸತೀಶನ್ ಹಾಗೂ ಸಂಸದ ಶಶಿ ತರೂರ್ ಸೇರಿದಂತೆ ಪ್ರಮುಖರು ಅಬೂಬಕರ್ ಅವರ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.

ಯಾರು ಈ ಶೇಕ್ ಅಬೂಬಕರ್

ಶೇಕ್ ಅಬೂಬಕರ್ ಅಹ್ಮದ್ ಎಂದು ಕರೆಯಲ್ಪಡುವ ಕಾಂತರಪುರ ಎ.ಪಿ ಅಬೂಬಕರ್ ಮುಸ್ಲಿಯಾರ್ ಅವರು ಹುಟ್ಟಿದ್ದು 1931ರ ಮಾರ್ಚ್‌ 22ರಂದು. ಬ್ರಿಟೀಷ್ ಭಾರತದ ಮದ್ರಾಸ್ ಪ್ರಾಂತ್ಯದ ಮಲಬಾರ್ ಜಿಲ್ಲೆಯ ಕಾಂತಪುರಂ ಎಂಬಲ್ಲಿ. 94 ವರ್ಷದ ಅವರು ಈಗ ಭಾರತದ ಗ್ರ್ಯಾಂಡ್ ಮುಫ್ತಿಯೂ ಹೌದು.

ಅಖಿಲ ಭಾರತ ವಿದ್ವಾಂಸರ ಒಕ್ಕೂಟ ಕಾರ್ಯದರ್ಶಿಯೂ ಅಗಿರುವ ಅವರು 'ಮರ್ಕಜ್' ಎನ್ನುವ ಹೆಸರಿನಲ್ಲಿ ಹಲವು ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಕಲ್ಲಿಕೋಟೆಯಲ್ಲಿರುವ ಮರ್ಕಜ್ ನಾಲೆಜ್ ಸಿಟಿ ವಿದ್ಯಾಭ್ಯಾಸ ಕ್ಷೇತ್ರಕ್ಕೆ ಅವರ ಅನನ್ಯ ಕೊಡುಗೆಗಳಲ್ಲಿ ಒಂದು. ಬೆಂಗಳೂರು, ಮಂಗಳೂರು ಸೇರಿ ಕರ್ನಾಟಕದ ಭಾಗಗಳಲ್ಲಿ ಖಾಝಿಯೂ ಆಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

ಹಲವು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಶಾಂತಿ ಸ್ಥಾಪನಾ ಸಮಾವೇಶಗಳಲ್ಲಿ ಭಾಗವಹಿಸಿರುವ ಅವರು, ಶೇಕ್ ಜಾಯೆದ್ ಅಂತರರಾಷ್ಟ್ರೀಯ ಶಾಂತಿ ಸಮಾವೇಶದ ಅಧ್ಯಕ್ಷರೂ ಹೌದು. ಅಲ್ಲದೆ ಐಸಿಸ್ ಉಗ್ರ ಸಂಘಟನೆಯ ವಿರುದ್ಧ ಫತ್ವಾ ಹೊರಡಿಸಿದ ಮೊದಲ ಧಾರ್ಮಿಕ ವಿದ್ವಾಂಸ ಎನ್ನುವ ಅಗ್ಗಳಿಕೆ ಅಬೂಬಕರ್ ಅವರದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries