ಶ್ರೀನಗರ: ಅಮರನಾಥ ಯಾತ್ರೆಯ ಮೊದಲ ತಂಡದ 5,892 ಯಾತ್ರಾರ್ಥಿಗಳ ಪ್ರಯಾಣಕ್ಕೆ ಜಮ್ಮುವಿನ ಭಗವತಿ ನಗರದ ಬೇಸ್ ಕ್ಯಾಂಪ್‌ನಲ್ಲಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಬುಧವಾರ ಚಾಲನೆ ನೀಡಿದರು.
ಕುಲ್ಗಾಮ್, ಅನಂತನಾಗ್, ಶ್ರೀನಗರದ ಜಿಲ್ಲೆಗಳಲ್ಲಿ ಯಾತ್ರಾರ್ಥಿಗಳ ಬೆಂಗಾವಲು ಪಡೆಗಳಿಗೆ ಹೂವಿನ ಹಾರ ಹಾಕುವ, ಹೂಗುಚ್ಛ ನೀಡುವ ಮತ್ತು ಸಿಹಿ ಹಂಚುವ ಮೂಲಕ ಆಡಳಿತದ ವತಿಯಿಂದ ಆತ್ಮೀಯ ಸ್ವಾಗತ ಕೋರಲಾಯಿತು ಎಂದು ಅಧಿಕಾರಿಗಳು ತಿಳಿಸಿದರು.
3,880 ಮೀಟರ್ ಎತ್ತರದವರೆಗೆ ಪ್ರಯಾಣಿಸುವ ಅಮರನಾಥ ಯಾತ್ರೆಯು ಜುಲೈ 3ರಿಂದ (ಗುರುವಾರ) ಆರಂಭವಾಗಲಿದೆ. ಅನಂತನಾಗ್ ಜಿಲ್ಲೆಯ ನುನ್‌ವಾನ್-ಪಹಲ್ಗಾಮ್ ಮಾರ್ಗ ಮತ್ತು ಗಂದೇರ್‌ಬಾಲ್ ಜಿಲ್ಲೆಯ ಬಲ್ತಾಲ್ ಮಾರ್ಗಗಳ ಮೂಲಕ ಯಾತ್ರೆಗೆ ಅವಕಾಶ ಕಲ್ಪಿಸಲಾಗಿದೆ. ಆಗಸ್ಟ್ 9ರಂದು ಯಾತ್ರೆಯು ಅಂತ್ಯಗೊಳ್ಳಲಿದೆ.
ಈ ವರ್ಷ 3.31 ಲಕ್ಷ ಯಾತ್ರಾರ್ಥಿಗಳು ನೋಂದಾಯಿಸಿದ್ದಾರೆ.
ಅಮರನಾಥ ಯಾತ್ರಾರ್ಥಿಗಳನ್ನು ಅನಂತನಾಗ್ ಜಿಲ್ಲೆಯಲ್ಲಿ ಸ್ಥಳೀಯರು ಹೂಗುಚ್ಛ ನೀಡಿ ಸ್ವಾಗತಿಸಿದರು -ಪಿಟಿಐ ಚಿತ್ರ




