HEALTH TIPS

ಯೆಮೆನ್‌ನಲ್ಲಿ ಮರಣದಂಡನೆ: ನಿಮಿಷಾ ರಕ್ಷಣೆಗೆ ಮುಂದಾಗದ ಕೇಂದ್ರ; ವೇಣುಗೋಪಾಲ್

ತಿರುವನಂತಪುರಂ: ಯೆಮೆನ್‌ನಲ್ಲಿ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾಳ ಮರಣದಂಡನೆ ರದ್ದು ಮಾಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಆರೋಪಿಸಿದ್ದಾರೆ.

ಈ ವಿಷಯವನ್ನು ಪ್ರಧಾನಿ ಮತ್ತು ವಿದೇಶಾಂಗ ಸಚಿವಾಲಯದ ಗಮನಕ್ಕೆ ತಂದಿದ್ದರೂ ಕೇಂದ್ರವು ಯಾವುದೇ ತುರ್ತು ಆಸಕ್ತಿ ತೋರಿಸದಿರುವುದು ದುಃಖಕರ ಎಂದು ವೇಣುಗೋಪಾಲ್ ವಾದಿಸಿದ್ದಾರೆ.

ಅಲಪ್ಪುಳ ಲೋಕಸಭಾ ಕ್ಷೇತ್ರದ ಸಂಸದರೂ ಆಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಸಾಮಾಜಿಕ ಮಾಧ್ಯಮ ವೇದಿಕೆ 'ಎಕ್ಸ್' ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದು, ಪ್ರಿಯಾಗೆ ವಿಧಿಸಲಾಗಿರುವ ಮರಣದಂಡನೆ ಶಿಕ್ಷೆಯು ನ್ಯಾಯದ ಗಂಭೀರ ವಿಡಂಬನೆ ಎಂದು ಹೇಳಿದ್ದಾರೆ.

ವಿದೇಶಿ ನೆಲದಲ್ಲಿ ಊಹಿಸಲಾಗದ ಕ್ರೌರ್ಯ ಮತ್ತು ದೌರ್ಜನ್ಯಕ್ಕೆ ಪ್ರಿಯಾ ಬಲಿಯಾಗಿದ್ದಾರೆ. ಅವರಿಗೆ ವಿಧಿಸಿರುವ ಶಿಕ್ಷೆ ನ್ಯಾಯವಲ್ಲ. ಅವರ ಮರಣದಂಡನೆಯನ್ನು ತಡೆಯಲು ತುರ್ತು ಮಧ್ಯಪ್ರವೇಶಕ್ಕೆ ಕೋರಿ ನಾನು ಪ್ರಧಾನಿಗೆ ಪತ್ರ ಬರೆದಿದ್ದೇನೆ ಎಂದು ಅವರು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಪ್ರಿಯಾಳ ಬಿಡುಗಡೆ ಪ್ರಯತ್ನಗಳಿಗಾಗಿ ₹ 1 ಕೋಟಿ ದೇಣಿಗೆ ಸಂಗ್ರಹಿಸಿದ್ದು, ಕೂಡಲೇ ಒಮನ್‌ಗೆ ತೆರಳುತ್ತಿದ್ದಾನೆ. ಪ್ರಿಯಾ ಬಿಡುಗಡೆ ಸಂಬಂಧ ನನಗೆ ಸಹಾಯ ಮಾಡುವುದಾಗಿ ಅಲ್ಲೊಬ್ಬರು ಹೇಳಿದ್ದಾರೆ ಎಂದು ಉದ್ಯಮಿ ಬಾಬಿ ಚೆಮ್ಮನೂರ್ ಹೇಳಿದ್ದಾರೆ.

ಬೋಚೆ ಫ್ಯಾನ್ಸ್ ಚಾರಿಟೇಬಲ್ ಟ್ರಸ್ಟ್ ಈ ಹಣವನ್ನು ಸಂಗ್ರಹಿಸಿದೆ ಎಂದು ಅವರು ಹೇಳಿದ್ದು, ಅಗತ್ಯವಿರುವ ಯಾವುದೇ ಹೆಚ್ಚುವರಿ ಹಣವನ್ನು ಮಲಯಾಳಿ ಸಮುದಾಯ ಮತ್ತು ನಿಮಿಷ ಪ್ರಿಯಾ ಆಕ್ಷನ್ ಕೌನ್ಸಿಲ್ ಒದಗಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಶಿಕ್ಷೆಯನ್ನು ಕಡಿಮೆ ಮಾಡಲು ತಕ್ಷಣವೇ ಮಧ್ಯಪ್ರವೇಶಿಸುವಂತೆ ಕೇರಳದ ಆಡಳಿತಾರೂಢ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಶುಕ್ರವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಪಾಲಕ್ಕಾಡ್ ಜಿಲ್ಲೆಯ ಕೊಲ್ಲೆಂಗೋಡ್‌ನವರಾದ ನಿಮಿಷಾ ಪ್ರಿಯಾ, ತನ್ನ ವ್ಯವಹಾರ ಪಾಲುದಾರನಾಗಿದ್ದ ಯೆಮೆನ್ ವ್ಯಕ್ತಿಯ ಕೊಲೆಗೆ ಸಂಬಂಧಿಸಿದಂತೆ 2020ರಲ್ಲಿ ಶಿಕ್ಷೆಗೊಳಗಾಗಿದ್ದರು.

2017ರ ಜುಲೈನಲ್ಲಿ ಕೊಲೆ ನಡೆದಿತ್ತು. ಕಳೆದ ವರ್ಷದ ನವೆಂಬರ್‌ನಲ್ಲಿ ಯೆಮೆನ್‌ನ ಸುಪ್ರೀಂ ಜುಡಿಷಿಯಲ್ ಕೌನ್ಸಿಲ್, ನಿಮಿಷಾ ಅವರ ಮೇಲ್ಮನವಿಯನ್ನು ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಅವರ ಗಲ್ಲು ಶಿಕ್ಷೆಯನ್ನು ಜುಲೈ 16ರಂದು ಜಾರಿಗೊಳಿಸಲು ಆದೇಶಿಸಲಾಗಿದೆ. ಪ್ರಿಯಾ ಪ್ರಸ್ತುತ ಸನಾ ಕೇಂದ್ರ ಕಾರಾಗೃಹದಲ್ಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries