ಚೆನ್ನೈ: 2026ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಂಸ್ಥಾಪಕ ದಳಪತಿ ವಿಜಯ್ ಅವರೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಶುಕ್ರವಾರ ಅಧಿಕೃತವಾಗಿ ಘೋಷಿಸಲಾಗಿದೆ.
ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ವಿಶೇಷ ನಿರ್ಣಯವನ್ನು ಅಂಗೀಕರಿಸಲಾಗಿದೆ.
ಅಲ್ಲದೇ ಮುಂದಿನ ತಿಂಗಳು ಸಾಕಷ್ಟು ಜನರನ್ನು ಸೇರಿಸಿ ಬೃಹತ್ ಸಮಾವೇಶ ನಡೆಸುವ ಪ್ರಸ್ತಾಪವೊಂದು ಪಕ್ಷದ ವೇದಿಕೆಯಲ್ಲಿ ಚರ್ಚೆಯಾಯಿತು. ಜತೆಗೆ ಹಳ್ಳಿಗಳಲ್ಲಿ ನಡೆಸುವ ಸಾರ್ವಜನಿಕ ಸಭೆಗಳಲ್ಲಿ ಪಕ್ಷದ ಸಿದ್ಧಾಂತವನ್ನು ತಿಳಿಸಲು ನಿರ್ಧರಿಸಿದೆ.
ಸಭೆಯಲ್ಲಿ ಮಾತನಾಡಿದ ವಿಜಯ್, ಬಿಜೆಪಿ ಜೊತೆಗಿನ ಮೈತ್ರಿ ವದಂತಿಯನ್ನು ತಳ್ಳಿಹಾಕಿದ್ದಾರೆ. ಸೈದ್ಧಾಂತಿಕ ಶತ್ರು ಮತ್ತು ಪ್ರತ್ಯೇಕತಾವಾದಿಗಳೊಂದಿಗೆ ನೇರ ಅಥವಾ ಪರೋಕ್ಷ ಮೈತ್ರಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸುತ್ತದೆ. ರಾಜಕೀಯ ಲಾಭಕ್ಕಾಗಿ ಜನರ ನಡುವೆ ಒಡಕನ್ನು ಸೃಷ್ಟಿಸುತ್ತಾರೆ. ಅವರ ಇಂತಹ ವಿಷಕಾರಿ ಪ್ರಯತ್ನಗಳು ಬೇರೆ ಕಡೆ ಫಲಿಸಬಹುದು. ಆದರೆ ತಮಿಳುನಾಡಿನಲ್ಲಿ ಎಂದಿಗೂ ನಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.




