HEALTH TIPS

ತುಳುನಾಡಿನ ಆಟಿ ಕೋಲದ ಬಗ್ಗೆ ತಿಳಿದಿದ್ದೀರಾ?-ಆದೂರು ಕಲ್ಕುಡ-ಕಲ್ಲುರ್ಟಿ ಆಟಿ ಕೋಲ ವಿಶೇಷ

ಮುಳ್ಳೇರಿಯ: ಆಟಿ ತಿಂಗಳು ಎಂದರೆ ಕರಾವಳಿಯಲಲಿ ಸಾಮಾನ್ಯವಾಗಿ ಧಾರಾಕಾರ ಮಳೆ ಮತ್ತು ಯಾವುದೇ ಆರಾಧನೆ-ಆಚರಣೆಗಳಿಲ್ಲದ ಋತು. ಆದರೆ ಕಾಸರಗೋಡಿನ ಆದೂರು ಎಂಬಲ್ಲಿ ಆಟಿ ಆರಂಭವಾಯಿತೆಂದರೆ ಆಟಿ ಭೂತಗಳ ಆರಾಧನೆ ಆರಂಭವಾಗುತ್ತದೆ. ಅದರಲ್ಲಿಯೂ ಆದೂರು ಕಲ್ಲುರ್ಟಿ-ಕಲ್ಕುಡ ದೈವಸ್ಥಾನದಲ್ಲಿ ಆಟಿ ತಿಂಗಳು ಪೂರ್ತಿ ದೈವದ ಕೋಲ ನಡೆಯುವುದೇ ಒಂದು ವಿಶೇಷ.

ಸುಮಾರು 400 ವರ್ಷಗಳ ಹಿಂದೆ ಗಟ್ಟದಿಂದ ಇಳಿದುಬಂದ ಕಲ್ಲುರ್ಟಿ-ಕಲ್ಕುಡ ದೈವಗಳಿಗೆ ಆದೂರು ಏಳ್ನಾಡುಗುತ್ತಿನಲ್ಲಿ ಆಶ್ರಯ ನೀಡಲಾಗುತ್ತದೆ ಎಂಬುದು ಪ್ರತೀತಿ. ಹಾಗೆಯೇ ಇಲ್ಲಿ ನೆಲೆಯಾಗಿದ್ದುಕೊಂಡು ಭಕ್ತರ ಇಷ್ಟಾರ್ಥಗಳನ್ನು ಈ ದೈವಗಳು ಸಿದ್ಧಿಸುತ್ತವೆ ಎಂಬುದು ಆಸ್ತಿಕರ ದೃಢ ನಂಬಿಕೆ. ಪಟೇಲ ನಾರಾಯಣ ಭಂಡಾರಿಯವರು ನಿಧನರಾದ ಕಾರಣ ಕೋಲಗಳ ಉಸ್ತುವಾರಿಯನ್ನು ಅವರ ಪುತ್ರ ಎ.ಜಿ.ಪ್ರಕಾಶ ಭಂಡಾರಿ ನೋಡಿಕೊಳ್ಳುತ್ತಿದ್ದರು. ಕಳೆದ ಕೆಲವು ವರ್ಷಗಳಿಂದ ಗುತ್ತಿನ ಹಿರಿಯರಾದ ರತ್ನಾಕರ ರೈ ಅವರ ನೇತೃತ್ವದಲ್ಲಿ ಬಿಪಿನ್ ದಾಸ್ ರೈಗಳ ಉಸ್ತುವಾರಿಯಲ್ಲಿ ಕೋಲಗಳು ನಡೆಯುತ್ತಿವೆ.


ಈ ವರ್ಷದ ದೈವದ ಕೋಲಗಳು ಆಷಾಢ ಅಥವಾ ಆಟಿ ಒಂದರಂದು ಆರಂಭಗೊಳ್ಳದೆ ಜು.24 ರಂದು ಸಂಜೆ ಸೇರಿ 25 ರಿಂದ ಆರಂಭಗೊಳ್ಳಲಿದೆ. ಮುಂದಿನ ಸಂಕ್ರಮಣದ ತನಕ(ಆ.16) ದೈವದ ಕೋಲಗಳು ನಡೆಯಲಿವೆ. ಆಟಿ ಒಂದರಂದು ಆರಂಭಗೊಂಡು ಸಂಕ್ರಮಣದತನಕ ಇಲ್ಲಿ ನಡೆಯುವುದು ವಾಡಿಕೆಯಾದರೂ ಈ ಬಾರಿ ಅನಿವಾರ್ಯ ಕಾರಣಗಳಿಂದ ಒಂದು ವಾರಗಳಷ್ಟು ತಡವಾಗಿ ಕೋಲಗಳು ಆರಂಭಗೊಳ್ಳಲಿದೆ. ಕೋಲಗಳೆಲ್ಲ ಹರಿಕೆ ಕೋಲಗಳೆನ್ನುವುದು ಒಂದು ವಿಶೇಷ. ಸೋಮವಾರ ದೈವಕ್ಕೆ ಬಾರಣೆ ಕೊಡುವ ಸಂಪ್ರದಾಯವಿಲ್ಲ ಎಂಬ ನಂಬಿಕೆಯ ಕಾರಣ ಈ ದಿನ ಕೋಲ ನಡೆಯುವುದಿಲ್ಲ. ಮೊದಲ ದಿನ ಆದೂರು ಗುತ್ತು ತರವಾಡಿನವರಿಂದ ಹುತ್ತರಿ ಕೋಲ ನಡೆಯುವುದು ವಾಡಿಕೆ. ಉಳಿದ ಒಂದೊಂದು ದಿನಗಳಲ್ಲಿ ವರ್ಷ ಮುಂಚಿತವಾಗಿ ತಮ್ಮ ಹೆಸರು ನೋಂದಾಯಿಸಿದ ಭಕ್ತಾದಿಗಳಿಂದ ಕ್ರಮ ಪ್ರಕಾರವಾಗಿ ಹರಿಕೆ ಕೋಲಗಳು ನಡೆಯುತ್ತವೆ. ಒಂದು ವರ್ಷ ಮುಂಚಿತವಾಗಿಯೇ ಹರಿಕೆ ಕೋಲಗಳ ನೋಂದಾವಣೆ ಇಲ್ಲಿ ನಡೆಯುತ್ತದೆ.

ಎರಡನೇ ದಿನ ಚಳ್ಳಂಗೋಡು ಬಾರಿಗೆಯವರಿಂದ ಮಧು ಹುತ್ತರಿಕೋಲ ನಡೆಯುತ್ತದೆ. ಉಳಿದ ಎಲ್ಲಾ ದಿನಗಳಲ್ಲಿ ಹರಿಕೆ ಕೋಲಗಳು ನಡೆಯುತ್ತದೆ. ಕೊನೆಯ ದಿನ ಅಂದರೆ ಸಿಂಹ ಸಂಕ್ರಮಣದ ದಿನದಂದು ಕಲ್ಲುರ್ಟಿ ಹಾಗೂ ಕಲ್ಕುಡ ದೈವಗಳ ನೇಮೋತ್ಸವ ನಡೆಯುತ್ತದೆ. ಜನರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಿಕೆಯನ್ನು ಸಲ್ಲಿಸಿ ಕೃತಾರ್ಥರಾಗುತ್ತಾರೆ. ಕಲ್ಲುರ್ಟಿ ಹಾಗೂ ಕಲ್ಕುಡ ದೈವಗಳ ಅಭಯದ 'ನುಡಿ' ಕೇಳಿ ಜನರು ಕೃತಾರ್ಥರಾಗಿ ಬದುಕಿನ ಬವಣೆಗೆ ಒಂದಷ್ಟು ಸಮಾಧಾನ-ಪರಿಹಾರ ಕಲ್ಪಿಸಿಕೊಳ್ಳುತ್ತಾರೆ. ಪ್ರತೀ ದಿನ ಬೆಳಗ್ಗೆ 9.30ಕ್ಕೆ ಆರಂಭಗೊಂಡು ಮಧ್ಯಾಹ್ನ 12ಕ್ಕೆ ಕೋಲ ಮುಕ್ತಾಯಗೊಳ್ಳುತ್ತದೆ. ಕೊನೆಯ ದಿನ ಸಂಜೆ 4ರ ತನಕ ಮುಂದುವರಿಯುತ್ತದೆ.


ಹರಿಕೆ ಸಲ್ಲಿಸುವುದು:

ಗ್ರಾಮ ನಿವಾಸಿಗಳು (ಸ್ಥಿರವಾಗಿ ವಾಸ್ತವ್ಯ ಇರುವವರು) ಭಕ್ತರು ಮತ-ಧರ್ಮ ಅತೀತವಾಗಿ ಈ ದೈವಸ್ಥಾನಕ್ಕೆ ಬಂದು ಹರಿಕೆಯನ್ನು ಸಲ್ಲಿಸುತ್ತಾರೆ. ದೈವಕ್ಕೆ ಪಟ್ಟೆ ಸೀರೆ, ಬೆಳ್ಳಿ-ಬಂಗಾರದ ಹೂ, ಸಮ್ಮಾನ(5 ಕುಡ್ತೆ ಅಕ್ಕಿ, ಕೋಳಿ, ಅಡುಗೆಗೆ ಬೇಕಾದ ಸಂಬಾರ ವಸ್ತುಗಳು), ಅವರವರ ಸಂಕಲ್ಪದಂತೆ ಆಭರಣ, ಹಣ, ಅಕ್ಕಿ, ಭಂಡಾರ ಕಾಣಿಕೆ, ವಸ್ತು ರೂಪದಲ್ಲಿ ಹರಿಕೆ ನೀಡಲಾಗುತ್ತದೆ.

ಹೆಣ್ಣು ಕೋಳಿಯೇ ಹೆಚ್ಚು:

ವರ್ಷಂಪ್ರತಿ ಇಲ್ಲಿಗೆ ಸರಾಸರಿ 800 ರಷ್ಟು ಕೋಳಿಗಳು ಹರಿಕೆ ರೂಪದಲ್ಲಿ ಸಲ್ಲಿಕೆಯಾಗುತ್ತದೆ. ಅದರಲ್ಲೂ ಬಹುತೇಕ ಹೆಣ್ಣು ಕೋಳಿಗಳು! ಒಂದು ನಿರ್ದಿಷ್ಟ(ದಲಿತ) ವರ್ಗಕ್ಕೆ ಸೇರಿದ ಜನರು ವಿವಾಹದ ಸಂದರ್ಭದಲ್ಲಿ ವರದಕ್ಷಿಣೆ ರೂಪದಲ್ಲಿ ಲಭಿಸುವ ಹಣದಿಂದ ರೂ.14ರ ಗಂಟಿನಲ್ಲಿ 7 ರೂ.ವನ್ನು ದೈವಕ್ಕೆ ಅರ್ಪಿಸುವುದು ಇಂದೂ ನಡೆದು ಬಂದಿದೆ.

ಕೋರಿ ಪುಂಡಿ ಪ್ರಸಾದ:

ಹರಿಕೆಯಾಗಿ ಬಂದ ಅಕ್ಕಿಯಿಂದ ಮಾಡಿದ ಹಿಡಿ ಗಾತ್ರದ ಕಡುಬು(ಪುಂಡಿ) ಹಾಗೂ ಹರಿಕೆಯಾಗಿ ಬಂದ ಕೋಳಿಯ ಪದಾರ್ಥವೇ ಇಲ್ಲಿಗೆ ಬರುವ ಭಕ್ತರಿಗೆ ನೀಡುವ ಪ್ರಸಾದ. ಸಾಧಾರಣವಾಗಿ 10 ಮುಡಿ ಅಕ್ಕಿಯ ಕಡುಬನ್ನು ತಯಾರಿಸುತ್ತಾರೆ. ದೈವದ ನೇಮ ಮುಕ್ತಾಯಗೊಂಡ ಮೇಲೆ ಭಕ್ತರಿಗೆ ಇದನ್ನು ಹಂಚಲಾಗುತ್ತದೆ.

ನಲಿಕೆದಾಯ ಸಮುದಾಯಕ್ಕೆ ಸೇರಿದವರು ಕಲ್ಕುಡ-ಕಟ್ಟುರ್ಟಿ ದೈವಗಳನ್ನು ಕಟ್ಟುವ ಕಾಯಕದಲ್ಲಿ ತೊಡಗುತ್ತಾರೆ. ಸುಮಾರು 300 ಮಂದಿ ದೈವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಇವರದು ಪ್ರತಿಫಲಾಪೇಕ್ಷೆ ಇಲ್ಲದ ಉಚಿತ ಸೇವೆ. ಇವರು ದೈವ ಸನ್ನಿಧಿಯಲ್ಲಿ ಮೊಕ್ತೇಸರರ ಕೈಯಿಂದ ಆದರಕ್ಕೆ ಪಾತ್ರರಾಗುತ್ತಾರೆ.

ಸುಮಾರು 5-6 ತಲೆಮಾರಿನ ಹಿಂದೆಯೇ (ಸುಮಾರು 400 ವರ್ಷ) ಈ ದೈವಗಳು ಇಲ್ಲಿ ನೆಲೆಗೊಂಡಿತೆಂದು ಗುತ್ತಿನ ಉಸ್ತುವಾರಿಯ ಬಿಪಿನ್ ದಾಸ್ ಅಭಿಪ್ರಾಯಪಡುತ್ತಾರೆ. ಗಟ್ಟದಿಂದ ಇಳಿದು ಬಂದ ಕಲ್ಕುಡ ಮತ್ತು ಕಲ್ಲುರ್ಟಿ ದೈವಗಳಿಗೆ ಅಡೂರಿನ ಹಿರಿಯ ವ್ಯಕ್ತಿಯೊಬ್ಬರು ಆಶ್ರಯ ನೀಡದಿದ್ದಾಗ ಆದೂರು ಏಳ್ನಾಡು ಗುತ್ತಿಗೆ ಬಂದು ನೆಲೆಗೊಂಡಿರಬೇಕು ಎಂದು ಅಭಿಪ್ರಾಯಪಡಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries