HEALTH TIPS

ವಿಚಾರಣೆ ಎದುರಿಸುವ ಮಕ್ಕಳ ಕಾಳಜಿ ಅಗತ್ಯ: ನ್ಯಾಯಮೂರ್ತಿ ಸೂರ್ಯಕಾಂತ್‌

ಹೈದರಾಬಾದ್‌: 'ಅಪರಾಧ ಪ್ರಕರಣಗಳ ವಿಚಾರಣೆಗಳಲ್ಲಿ ಮಕ್ಕಳನ್ನು 'ಸಾಕ್ಷಿ' ಎಂಬ ದೃಷ್ಟಿಯಿಂದ ಮಾತ್ರವೇ ನೋಡಲಾಗುತ್ತಿದೆ. ಇದು ಬದಲಾಗಬೇಕು. ವಿಚಾರಣೆಗೆ ಒಳಗಾಗುವ ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯ ಸೇರಿ ಅವರ ಒಟ್ಟಾರೆ ಕಾಳಜಿಯ ಬಗ್ಗೆಯೂ ಗಮನ ಕೇಂದ್ರೀಕರಿಸಬೇಕು' ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಸೂರ್ಯಕಾಂತ್‌ ಅಭಿಪ್ರಾಯಪಟ್ಟರು.

ಪೋಕ್ಸೊ ಕಾಯ್ದೆ ಕುರಿತು ಇಲ್ಲಿ ನಡೆದ ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

'ಅಪರಾಧ ಪ್ರಕರಣಗಳಲ್ಲಿ ಸಾಕ್ಷಿಯಾಗುವ ಮಕ್ಕಳ ರಕ್ಷಣೆಯ ಕುರಿತು ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆಗಳಾಗಬೇಕಿದೆ. ಅಪರಾಧಗಳನ್ನು ನೋಡುವ ಅಥವಾ ಅನುಭವಿಸುವ ಮಕ್ಕಳ ಆರೈಕೆ ಮಾಡದ ಹೊರತು ನಮ್ಮ ವ್ಯವಸ್ಥೆಯು ಅಪೂರ್ಣವಾಗಿಯೇ ಇರಲಿದೆ. ಘಟನೆಗಳಿಂದ ಆದ ನೋವನ್ನು ಮತ್ತೆ ಮತ್ತೆ ಕೆದಕದಂಥ ವ್ಯವಸ್ಥೆಯನ್ನು ರೂಪಿಸಬೇಕಿದೆ' ಎಂದರು.

'ಉದಾಹರಣೆಗೆ 10 ವರ್ಷದ ಮಗುವೊಂದು ತನಗಾದ ನೋವು, ಗಾಬರಿಯ ವಿಚಾರಗಳ ವಿವರಣೆಗಳನ್ನು ಮೊದಲಿಗೆ ಶಿಕ್ಷಕರಿಗೆ, ಪೊಲೀಸ್‌ ಅಧಿಕಾರಿಗೆ, ವೈದ್ಯಾಧಿಕಾರಿಗೆ ಬಳಿಕ ವಕೀಲರಿಗೆ ಕೊನೆಯಲ್ಲಿ ನ್ಯಾಯಾಧೀಶರಿಗೆ ನೀಡಬೇಕಾಗುತ್ತದೆ. ಪ್ರತಿಬಾರಿ ತನಗಾಗಿದ್ದನ್ನು ವಿವರಿಸುವಾಗಲೂ ಆ ಮಗುವಿನ ಧ್ವನಿಯು ಅಧೀರವಾಗುತ್ತದೆ, ಕೊನೆಗೊಮ್ಮೆ ಏನನ್ನೂ ಹೇಳಿಕೊಳ್ಳಲಾಗದ ಸ್ಥಿತಿ ತಲುಪುತ್ತದೆ' ಎಂದು ಕಳವಳ ವ್ಯಕ್ತಪಡಿಸಿದರು.

'ಮಗುವೊಂದಕ್ಕೆ ನ್ಯಾಯದಾನ ಆರಂಭವಾಗುವುದು ನ್ಯಾಯಾಲಯದ ಕೊಠಡಿಗಳಿಂದಲ್ಲ. ಯಾವಾಗ ಆ ಮಗುವು ತಾನು ಸುರಕ್ಷಿತ ಎಂದು ಅಂದುಕೊಳ್ಳುತ್ತದೆಯೊ ಅಲ್ಲಿಂದಲೇ ನ್ಯಾಯದಾನ ಆರಂಭವಾಗುತ್ತದೆ. ನ್ಯಾಯಾಲಯದ ಕೊಠಡಿ ಅಥವಾ ಅದರಿಂದ ಹೊರಗೆ- ಹೀಗೆ ಎಲ್ಲ ಕಡೆಗಳಲ್ಲಿಯೂ ತಾನು ಸುರಕ್ಷಿತ ಎಂಬ ಭಾವ ಮಗುವಿನಲ್ಲಿ ಮೂಡಬೇಕಾಗುತ್ತದೆ' ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries