ಮುಳ್ಳೇರಿಯ: ಜಿಲ್ಲೆಯಲ್ಲಿ ಸುರಿಯುತ್ತಿರುವ ಬಿರುಸಿನ ಮಳೆಗೆ ಅಡೂರು ಪೇಟೆಯಿಂದ ಕಾಟಿಕ್ಕಜೆ ತೆರಳುವ ರಸ್ತೆ ಮಧ್ಯೆ ಕೋರಿಕಂಡ ಎಂಬಲ್ಲಿ ಗುಡ್ಡವೊಂದು ಕುಸಿದುಬಿದ್ದು ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುವಂತಾಯಿತು. ಭೂಕುಸಿತ ಸಂಭವಿಸುವ ಸಂದರ್ಭ ಈ ಪ್ರದೇಶದಲ್ಲಿ ವಾಹನಗಳ ಸಂಚಾರವಿಲ್ಲದಿರುವುದರಿಂದ ದುರಂತ ತಪ್ಪಿದೆ.
ದೇಲಂಪಾಡಿ ಗ್ರಾಮ ಪಂಚಾಯಿತಿಯ 6ನೇ ವಾರ್ಡ್‍ನ ಕೋರಿಕಂಡದಲ್ಲಿ ಸತತ ಮೂರನೇ ಬಾರಿಗೆ ಭೂಕುಸಿತ ಸಂಭವಿಸುತ್ತಿದೆ. ಕೋರಿಕಂಡ ಪ್ರದೇಶದಲ್ಲಿ ಭೂಕುಸಿತವುಂಟಾಗುತ್ತಿರುವ ಬಗ್ಗೆ ಹಲವು ವಾರ್ಡ್ ಸದಸ್ಯರ ಮೂಲಕ ಪಂಚಾಯಿತಿಗೆ ಹಾಗೂ ಇತರ ಅಧಿಕಾರಿಗಳಿಗೆ ಮನವಿ ಮೂಲಕ ಗಮನ ಸೆಳೆದಿದ್ದರೂ, ಯಾವುದೇ ಪ್ರಯೋಜನವಿಲ್ಲದಾಗಿದೆ ಎಂದು ಸ್ಥಳೀಯ ನಾಗರಿಕರು ದೂರಿದ್ದಾರೆ.
ಈ ಹಾದಿಯಾಗಿ ಹಲವಾರುಮಂದಿ ವಿವಿಧ ಉದ್ದೇಶಗಳಿಗಾಗಿ ಅಡೂರು, ಮುಳ್ಳೇರಿಯ, ಕಾಸರಗೋಡು ಹಾಗೂ ನೆರೆಯ ಕರ್ನಾಟಕಕ್ಕೆ ತೆರಳಬೇಕಾಗಿದೆ. ಭಾರಿ ಪ್ರಮಾಣದಲ್ಲಿ ರಾಶಿ ಬಿದ್ದಿರುವ ಮಣ್ಣು ತೆರವುಗೊಳಿಸುವ ಕಾರ್ಯ ಮುಂದುವರಿದಿದೆ.


