ಅಹಮದಾಬಾದ್: ಗುಜರಾತ್‌ನಲ್ಲಿ ಆಡಳಿತಾರೂಢ ಬಿಜೆಪಿಗೆ ಕಾಂಗ್ರೆಸ್ ಸಹಾಯ ಮಾಡುತ್ತಿದೆ. ಹೀಗಾಗಿ ನಮ್ಮ ಪಕ್ಷವು ಇನ್ನು ಮುಂದೆ ಕಾಂಗ್ರೆಸ್‌ನೊಂದಿಗೆ ಯಾವುದೇ ಮೈತ್ರಿಯನ್ನು ಹೊಂದಿರುವುದಿಲ್ಲ ಎಂದು ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಹೇಳಿದರು.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು '2027ರ ವಿಧಾನಸಭೆ ಚುನಾವಣೆಯಲ್ಲಿ ಗುಜರಾತ್‌ನಲ್ಲಿ ನಮ್ಮ ಪಕ್ಷ ಗೆಲುವು ಸಾಧಿಸಲಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಹೊರತುಪಡಿಸಿ ಜನರು ನಮ್ಮ ಪಕ್ಷವನ್ನು ಆಯ್ಕೆಯಾಗಿ ಹೊಂದಿದ್ದಾರೆ' ಎಂದರು.
ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ 'ಇಂಡಿಯಾ' ಮೈತ್ರಿಕೂಟವು ಕಳೆದ ವರ್ಷ ನಡೆದ ಲೋಕಸಭೆ ಚುನಾವಣೆಯ ಉದ್ದೇಶವನ್ನು ಮಾತ್ರ ಹೊಂದಿತ್ತು. ಕಾಂಗ್ರೆಸ್‌ನೊಂದಿಗೆ ನಾವು ಮೈತ್ರಿ ಮಾಡಿಕೊಂಡಿಲ್ಲ. ಮೈತ್ರಿ ಇದ್ದರೆ, ಉಪಚುನಾವಣೆಯಲ್ಲಿ ಕಾಂಗ್ರೆಸ್ ಏಕೆ ಸ್ಪರ್ಧಿಸಿತು? ನಮ್ಮನ್ನು ಸೋಲಿಸಲು ಅದು ಹೀಗೆ ಮಾಡಿದೆ. ನಮ್ಮ ಮತಗಳನ್ನು ಒಡೆಯಲು ಬಿಜೆಪಿಯೇ ಕಾಂಗ್ರೆಸ್ ಅನ್ನು ಚುನಾವಣೆಗೆ ಕಳುಹಿಸಿತ್ತು' ಎಂದು ಹೇಳಿದರು.
ಇಂದಿನಿಂದ 'ಗುಜರಾತ್ ಜೋಡೊ ಅಭಿಯಾನ'ವನ್ನು ಪಕ್ಷವು ಹಮ್ಮಿಕೊಂಡಿದೆ. ನಮ್ಮ ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಜನರು ಎಎಪಿಯನ್ನು ಸೇರಬಹುದು. ನಮ್ಮ ಕಾರ್ಯಕರ್ತರೂ ಎಲ್ಲಾ ಮನೆಗಳಿಗೆ ತೆರಳಲಿದ್ದಾರೆ. ಎಎಪಿಯು ಯುವಕರ ಪಕ್ಷ. ಭ್ರಷ್ಟಾಚಾರ ರಹಿತ ಗುಜರಾತ್‌ಗಾಗಿ ನಮ್ಮ ಪಕ್ಷದೊಂದಿಗೆ ಕೈ ಜೋಡಿಸಿ ಎಂದು ಯುವಕರಲ್ಲಿ ಮನವಿ ಮಾಡುತ್ತೇನೆ' ಎಂದರು.




