HEALTH TIPS

ಮರಣದಂಡನೆ ರದ್ದಾಗಿದೆ; ನಿಮಿಷ ಪ್ರಿಯಾ ಬಿಡುಗಡೆಯಾಗಲಿದ್ದಾರೆ: ಡಾ. ಕೆ.ಎ. ಪೌಲ್

ಸನಾ: 'ಭಾರತ ಮತ್ತು ಯೆಮೆನ್‌ನ ಅಧಿಕಾರಿಗಳ ಹಗಲಿರುಳು ಪರಿಶ್ರಮದ ಫಲವಾಗಿ ಕೇರಳದ ಶುಶ್ರೂಷಕಿ ನಿಮಿಷಾ ಪ್ರಿಯಾ ಅವರಿಗೆ ವಿಧಿಸಲಾಗಿದ್ದ ಮರಣದಂಡನೆ ಶಿಕ್ಷೆಯನ್ನು ಯೆಮೆನ್ ಸರ್ಕಾರ ರದ್ದುಗೊಳಿಸಿದೆ' ಎಂದು ಗ್ಲೋಬಲ್‌ ಪೀಸ್‌ ಇನ್‌ಷಿಯೇಟಿವ್‌ ಸಂಸ್ಥಾಪಕ ಮತ್ತು ಧಾರ್ಮಿಕ ಗುರು ಡಾ.ಕೆ.ಎ. ಪೌಲ್‌ ಹೇಳಿದ್ದಾರೆ.

ಈ ಕುರಿತು ವಿಡಿಯೊ ಸಂದೇಶ ಬಿಡುಗಡೆ ಮಾಡಿರುವ ಅವರು, 'ಯೆಮೆನ್‌ ನಾಯಕರ ಪರಿಣಾಮಕಾರಿ ಮತ್ತು ಪ್ರಾರ್ಥನಾಪೂರ್ವಕ ಪ್ರಯತ್ನದಿಂದಾಗಿ ಇದು ಸಾಧ್ಯವಾಗಿದೆ. ನಿಮಿಷ ಪ್ರಿಯಾ ಅವರ ಪ್ರಾಣ ಉಳಿಸಲು ಕಳೆದ ಹತ್ತು ದಿನಗಳಲ್ಲಿ ನಾಯಕರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಎಲ್ಲಾ ನಾಯಕರಿಗೂ ಧನ್ಯವಾದಗಳು. ಇದರಲ್ಲಿ ಭಾರತದ ಪ್ರಯತ್ನವೂ ಸಾಕಷ್ಟಿದೆ. ದೇವರ ದಯೆಯಿಂದ ನಿಮಿಷ ಬಿಡುಗಡೆಯಾಗಲಿದ್ದಾರೆ. ನಿಮಿಷ ಅವರನ್ನು ಕಾನೂನುಬದ್ಧವಾಗಿ ಮತ್ತು ಸುರಕ್ಷಿತವಾಗಿ ಕರೆದೊಯ್ಯಬಹುದು' ಎಂದು ಹೇಳಿದ್ದಾರೆ.

'ಸನಾ ಜೈಲಿನಲ್ಲಿರುವ ನಿಮಿಷ ಅವರನ್ನು ಒಮಾನ್‌, ಜೆಡ್ಡಾ, ಈಜಿಪ್ಟ್‌, ಇರಾನ್ ಅಥವಾ ಟರ್ಕಿಗೆ ಕರೆದೊಯ್ಯಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಿರುವ ಭಾರತಕ್ಕೆ ಅಗತ್ಯ ಸಹಕಾರ ನೀಡಲಾಗುವುದು' ಎಂದು ಡಾ. ಪೌಲ್ ತಿಳಿಸಿದ್ದಾರೆ.

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಕಳೆದವಾರ ಹೇಳಿಕೆಯೊಂದನ್ನು ನೀಡಿ, 'ನಿಮಿಷ ಅವರ ಬಿಡುಗಡೆಗೆ ಸರ್ಕಾರ ಸಕ್ರಿಯವಾಗಿ ಕೆಲಸ ಮಾಡುತ್ತಿದೆ' ಎಂದು ಹೇಳಿತ್ತು.

'ಪ್ರಿಯಾ ಅವರ ಪರವಾಗಿ ಯೆಮೆನ್‌ನಲ್ಲಿ ಸಂಧಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ವಕೀಲರನ್ನು ಸರ್ಕಾರ ನೇಮಿಸಿದೆ. ಷರಿಯಾ ಕಾನೂನಿನಲ್ಲಿ ಕ್ಷಮೆಗೆ ಇರುವ ಮಾರ್ಗಗಳನ್ನು ಇವರು ಶೋಧಿಸಲಿದ್ದಾರೆ. ಇದೊಂದು ಸೂಕ್ಷ್ಮ ಪ್ರಕರಣವಾಗಿರುವುದರಿಂದ ಎಲ್ಲಾ ಆಯಾಮಗಳಿಂದ ಲಭ್ಯವಿರುವ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ' ಎಂದು ಸಚಿವಾಲಯದ ವಕ್ತಾರ ರಣಧೀರ ಜೈಸ್ವಾಲ್ ಹೇಳಿದ್ದರು.

'ಜುಲೈ 16ರಂದು ಮರಣದಂಡನೆಗೆ ನಿಗದಿಯಾಗಿದ್ದ ದಿನಾಂಕವನ್ನು ಯೆಮೆನ್‌ ಮುಂದೂಡಿದೆ. ಪ್ರಿಯಾ ಅವರ ಕುಟುಂಬದೊಂದಿಗೆ ಸಮಾಲೋಚಕರು ಸಂಪರ್ಕದಲ್ಲಿದ್ದಾರೆ. ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ಸ್ಥಳೀಯ ಆಡಳಿತದೊಂದಿಗೆ ಸಚಿವಾಲಯ ಸಂಪರ್ಕದಲ್ಲಿದೆ' ಎಂದು ಹೇಳಿದ್ದರು.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries