ನವದೆಹಲಿ: ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು 'ಆಯಕ್ಸಿಯಂ-4' ಕಾರ್ಯಕ್ರಮದ ಭಾಗವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ತೆರಳಿದ್ದ ಇತರ ಮೂವರು ಭೂಮಿಯತ್ತ ಸೋಮವಾರ ಪ್ರಯಾಣ ಆರಂಭಿಸಿದರು.
ನಾಲ್ವರನ್ನು ಹೊತ್ತ 'ಡ್ರ್ಯಾಗನ್' ಬಾಹ್ಯಾಕಾಶ ಕೋಶ ಸೋಮವಾರ ಸಂಜೆ 4.45ಕ್ಕೆ (ಭಾರತೀಯ ಕಾಲಮಾನ) ಐಎಸ್‌ಎಸ್‌ನಿಂದ ಯಶಸ್ವಿಯಾಗಿ ಬೇರ್ಪಟ್ಟು (ಅನ್‌ಡಾಕ್) ಭೂಮಿಯತ್ತ ಪಯಣ ಬೆಳೆಸಿದೆ.
ಮೊದಲೇ ನಿಗದಿಪಡಿಸಿದ್ದ ಸಮಯಕ್ಕಿಂತ 10 ನಿಮಿಷ ತಡವಾಗಿ ಬೇರ್ಪಡುವಿಕೆ ಪ್ರಕ್ರಿಯೆ ನಡೆದಿದೆ.
ಐಎಸ್‌ಎಸ್‌ನಿಂದ ಬೇರ್ಪಟ್ಟಿರುವ 'ಡ್ರ್ಯಾಗನ್' ಬಾಹ್ಯಾಕಾಶ ಕೋಶ 22 ಗಂಟೆಗಳ ಪ್ರಯಾಣದ ಬಳಿಕ, ಮಂಗಳವಾರ ಮಧ್ಯಾಹ್ನ 3.01ಕ್ಕೆ ಕ್ಯಾಲಿಫೋರ್ನಿಯಾದ ಕರಾವಳಿಯಲ್ಲಿ ಇಳಿಯಲಿದೆ.
'ಆಯಕ್ಸಿಯಂ-4' ಕಾರ್ಯಕ್ರಮದ ಭಾಗವಾಗಿ ಶುಕ್ಲಾ, ಕಮಾಂಡರ್ ಪೆಗ್ಗಿ ವಿಟ್ಸನ್, ಹಂಗರಿಯ ಟಿಬೊರ್ ಕಾಪು ಹಾಗೂ ಪೋಲೆಂಡ್‌ನ ಸ್ಲಾವೋಸ್ ಯು.ವಿನ್ಸೀವ್ಸ್‌ಕಿ ಅವರು ಜೂನ್ 26ರಂದು ಐಎಸ್‌ಎಸ್‌ಗೆ ತೆರಳಿದ್ದರು.
ಜಿತೇಂದ್ರ ಸಿಂಗ್, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಶುಭಾಂಶು... ನಿಮಗೆ ಸ್ವಾಗತ... ನೀವು ಭೂಮಿಗೆ ಮರಳುವುದನ್ನು ಇಡೀ ದೇಶ ಕುತೂಹಲದಿಂದ ಎದುರು ನೋಡುತ್ತಿದೆ.
ಶುಕ್ಲಾ ಹಾಗೂ ಸಹಯಾತ್ರಿಕರು 'ಅನ್‌ಡಾಕ್' ಪ್ರಕ್ರಿಯೆಗೆ ಸುಮಾರು ಎರಡು ಗಂಟೆಗಳಿಗೆ ಮುನ್ನ, ಸೋಮವಾರ ಮಧ್ಯಾಹ್ನ 2.37ಕ್ಕೆ ಐಎಸ್‌ಎಸ್‌ನಿಂದ 'ಡ್ರ್ಯಾಗನ್' ಬಾಹ್ಯಾಕಾಶ ಕೋಶ ಪ್ರವೇಶಿಸಿದರು. ಭೂಮಿಗೆ ವಾಪಸಾಗುವ ಈ ನಾಲ್ವರನ್ನು, ಐಎಸ್‌ಎಸ್‌ನಲ್ಲಿದ್ದ ಇತರರು ಬೀಳ್ಕೊಟ್ಟರು.
ಶುಕ್ಲಾ ಹಾಗೂ ಇತರ ಮೂವರಿಗೆ ಐಎಸ್‌ಎಸ್‌ನಲ್ಲಿ ಭಾನುವಾರ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು. 'ಶೀಘ್ರದಲ್ಲೇ ಭೂಮಿಗೆ ಮರಳಲಿದ್ದೇವೆ' ಎಂದು ಶುಕ್ಲಾ ಈ ವೇಳೆ ಹೇಳಿದ್ದರು.
ಬಾಹ್ಯಾಕಾಶದಲ್ಲಿ 18 ದಿನಗಳನ್ನು ಕಳೆದಿರುವ ಗಗನಯಾತ್ರಿಗಳು ಭೂಮಿಗೆ ಮರಳಿದ ಬಳಿಕ, ಏಳು ದಿನಗಳ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಭೂಮಿಯ ಗುರುತ್ವಾಕರ್ಷಣೆಗೆ ಹೊಂದಿಕೊಳ್ಳಲು ವೈದ್ಯರ ತಂಡ ಅವರಿಗೆ ನೆರವಾಗಲಿದೆ.
ಸೋಮವಾರ ಸಂಜೆ 4.45ಕ್ಕೆ 'ಅನ್‌ಡಾಕ್' ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಇಳಿಯಲಿರುವ ಬಾಹ್ಯಾಕಾಶ ಕೋಶ ಮಂಗಳವಾರ ಮಧ್ಯಾಹ್ನ 3.01ಕ್ಕೆ ಬಂದಿಳಿಯುವ ಸಾಧ್ಯತೆ.
433 ಗಂಟೆ ಶುಕ್ಲಾ ಐಎಸ್‌ಎಸ್‌ನಲ್ಲಿ ಕಳೆದಿರುವ ಅವಧಿ
288 'ಆಯಕ್ಸಿಯಂ-4' ಗಗನಯಾತ್ರಿಗಳು ಇದ್ದಾಗ ಐಎಸ್‌ಎಸ್ ಭೂಮಿಗೆ ಹಾಕಿರುವ ಸುತ್ತು
76 ಲಕ್ಷ ಕಿ.ಮೀ ಈ ಅವಧಿಯಲ್ಲಿ ಐಎಸ್‌ಎಸ್ ಕ್ರಮಿಸಿದ ದೂರ




