ನವದೆಹಲಿ: ಯೂರಿಯಾ ಮತ್ತು ಡಿಎಪಿ ಒಳಗೊಂಡಂತೆ ಅಗತ್ಯ ರಸಗೊಬ್ಬರಗಳ ಕೊರತೆ ಅನುಭವಿಸುತ್ತಿರುವ ರೈತರಿಗೆ ನೆರವಾಗಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಚೀನಾದಿಂದ ಆಮದು ಮಾಡಿಕೊಳ್ಳುವ ರಸಗೊಬ್ಬರಗಳ ಪೂರೈಕೆ ನಿಂತಿರುವುದರಿಂದ ಕೊರತೆ ಎದುರಾಗಿದೆ ಎಂದು ಹೇಳಿದ್ದಾರೆ.
'ಒಂದೆಡೆ, ಪ್ರಧಾನಿ ನರೇಂದ್ರ ಮೋದಿ ಅವರು ರಸಗೊಬ್ಬರ ಚೀಲಗಳ ಮೇಲೆ ತಮ್ಮ ಫೋಟೋ ಮುದ್ರಿಸುತ್ತಿದ್ದರೆ, ಮತ್ತೊಂದೆಡೆ, ರೈತರು 'ಮೇಡ್ ಇನ್ ಚೀನಾ' ರಸಗೊಬ್ಬರದ ಮೇಲೆ ಅವಲಂಬಿತರಾಗುತ್ತಿದ್ದಾರೆ' ಎಂದು ವ್ಯಂಗ್ಯವಾಡಿದ್ದಾರೆ.
'ಭಾರತವು ಕೃಷಿ ಪ್ರಧಾನ ದೇಶವಾಗಿದ್ದು, ರೈತರು ನಮ್ಮ ಆರ್ಥಿಕತೆಯ ಬೆನ್ನೆಲುಬು. ಆದರೆ, ವಿದೇಶಗಳ ಮೇಲಿನ ಅವಲಂಬನೆಯಿಂದಾಗಿ ಈ ಬೆನ್ನೆಲುಬು ಬಾಗುತ್ತಿದೆ. ಭಾರತವು ಚೀನಾದಿಂದ ಶೇ 80ರಷ್ಟು ರಸಗೊಬ್ಬರ ಆಮದು ಮಾಡಿಕೊಳ್ಳುತ್ತದೆ. ಇದೀಗ ಚೀನಾ ಪೂರೈಕೆ ನಿಲ್ಲಿಸಿದೆ' ಎಂದು ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
'ಚೀನಾದಿಂದ ಯಾವುದೇ ಸಮಯದಲ್ಲಿ ಪೂರೈಕೆ ನಿಲ್ಲಬಹುದು ಎಂಬುದನ್ನು ತಿಳಿದಿದ್ದರೂ, ಸರ್ಕಾರ ಸೂಕ್ತ ಸಿದ್ಧತೆ ಮಾಡಿಕೊಳ್ಳಲಿಲ್ಲ. ನಮ್ಮಲ್ಲೇ ಉತ್ಪಾದನೆಯನ್ನು ಉತ್ತೇಜಿಸುವ ಅವಕಾಶವಿದ್ದರೂ, ಯಾವುದೇ ನೀತಿ ಅಥವಾ ಯೋಜನೆಯನ್ನು ರೂಪಿಸಲಿಲ್ಲ' ಎಂದು ಟೀಕಿಸಿದ್ದಾರೆ.
ಜೆ.ಪಿ. ನಡ್ಡಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷಹಿಮಾಚಲ ಪ್ರದೇಶದ ಕಾಂಗ್ರೆಸ್ ಸರ್ಕಾರವು ಕೇಂದ್ರದಿಂದ ಬಿಡುಗಡೆಯಾದ ಹಣವನ್ನು ಖರ್ಚು ಮಾಡದೆ ಜನರಿಗೆ ಅನ್ಯಾಯ ಮಾಡುತ್ತಿದೆ
ಮಲತಾಯಿ ಧೋರಣೆ: ಖರ್ಗೆ ಟೀಕೆ
ಕೇಂದ್ರ ಸರ್ಕಾರವು ಹಿಮಾಚಲ ಪ್ರದೇಶದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಆರೋಪಿಸಿದ್ದಾರೆ. ಕಳೆದ ಕೆಲ ವರ್ಷಗಳಿಂದ ರಾಜ್ಯಕ್ಕೆ ಬಾಕಿ ಇರುವ ಪ್ರಕೃತಿ ವಿಕೋಪ ಪರಿಹಾರ ನಿಧಿಯನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ
'₹9 ಸಾವಿರ ಕೋಟಿ ಪರಿಹಾರ ಬಿಡುಗಡೆ ಮಾಡುವಂತೆ ಹಿಮಾಚಲ ಪ್ರದೇಶ ಸರ್ಕಾರ ಈ ಬಾರಿಯ ಮಳೆಗೂ ಮುನ್ನ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. 2023ರಲ್ಲಿ ದುರಂತ ನಡೆದಾಗ ರಾಜ್ಯದ ಕಾಂಗ್ರೆಸ್ ಸರ್ಕಾರ ₹4500 ಕೋಟಿ ವಿಶೇಷ ಪರಿಹಾರ ಬಿಡುಗಡೆ ಮಾಡಿತ್ತು. ಆದರೆ ಕೇಂದ್ರ ಸರ್ಕಾರ ಕೇವಲ ₹ 433 ಕೋಟಿ ಬಿಡುಗಡೆ ಮಾಡಿದೆ' ಎಂದು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.




