HEALTH TIPS

ಬ್ರಿಟನ್ ಪ್ರವಾಸದಲ್ಲಿ ಪ್ರಧಾನಿ ಮೋದಿ: ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಸಾಧ್ಯತೆ

ಲಂಡನ್: ಬ್ರಿಟನ್‌ ಹಾಗೂ ಮಾಲ್ದೀವ್ಸ್‌ಗೆ ನಾಲ್ಕು ದಿನಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಬುಧವಾರ ಲಂಡನ್‌ಗೆ ಬಂದಿಳಿದಿದ್ದಾರೆ. 

ಇಂಡೋ-ಪೆಸಿಫಿಕ್ ಉಸ್ತುವಾರಿ ಹೊಂದಿರುವ ಯುಕೆ ವಿದೇಶಾಂಗ ಕಚೇರಿಯ ಸಚಿವೆ ಕ್ಯಾಥರೀನ್ ವೆಸ್ಟ್, ಯುಕೆಯಲ್ಲಿನ ಭಾರತೀಯ ರಾಯಭಾರಿ ವಿಕ್ರಮ್ ದೊರೈಸ್ವಾಮಿ ಮತ್ತು ನವದೆಹಲಿಯ ಬ್ರಿಟನ್‌ ರಾಯಭಾರಿ ಲಿಂಡಿ ಕ್ಯಾಮರೂನ್ ಅವರು ಪ್ರಧಾನಿ ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು.

ಇಂದು (ಗುರುವಾರ) ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಜೊತೆ ಮಾತುಕತೆ ನಡೆಸಲಿರುವ ಪ್ರಧಾನಿ, ಹೂಡಿಕೆ, ವ್ಯಾಪಾರ, ರಕ್ಷಣೆ, ಶಿಕ್ಷಣ, ಸಂಶೋಧನೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಐತಿಹಾಸಿಕ ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ(ಎಫ್‌ಟಿಎ) ಸಹಿ ಹಾಕುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.

ಲಂಡನ್‌ನಿಂದ ವಾಯುವ್ಯಕ್ಕೆ 50 ಕಿ.ಮೀ ದೂರದಲ್ಲಿರುವ ಬ್ರಿಟನ್‌ ಪ್ರಧಾನಿಯ ಅಧಿಕೃತ ನಿವಾಸವಾದ ಚೆಕರ್ಸ್‌ನಲ್ಲಿ ಮೋದಿ ಅವರಿಗೆ ಸ್ಟಾರ್ಮರ್ ಆತಿಥ್ಯ ನೀಡಲಿದ್ದಾರೆ.

ಬ್ರಿಟನ್‌ ಪ್ರವಾಸದ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಲಂಡನ್‌ಗೆ ಬಂದಿಳಿದಿದ್ದೇನೆ. ಈ ಭೇಟಿ ಉಭಯ ದೇಶಗಳ ನಡುವಿನ ಆರ್ಥಿಕ ಪಾಲುದಾರಿಕೆಯನ್ನು ಮುನ್ನಡೆಸುವಲ್ಲಿ ಬಹಳ ದೂರ ಸಾಗಲಿದೆ. ಸಮೃದ್ಧಿ, ಬೆಳವಣಿಗೆ ಮತ್ತು ನಮ್ಮ ಜನರಿಗೆ ಉದ್ಯೋಗ ಸೃಷ್ಟಿ ಹೆಚ್ಚಿಸುವತ್ತ ಗಮನ ಹರಿಸಲಾಗುವುದು. ಜಾಗತಿಕ ಪ್ರಗತಿಗೆ ಭಾರತ-ಬ್ರಿಟನ್‌ ಗಾಢ ಸ್ನೇಹ ಅತ್ಯಗತ್ಯ ಎಂದು ಹೇಳಿದ್ದಾರೆ.

ಎಫ್‌ಟಿಎಗೆ ಸಹಿ ಸಾಧ್ಯತೆ

ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮತ್ತು ಬ್ರಿಟನ್‌ ಸಚಿವ ಜೋನಾಥನ್ ರೆನಾಲ್ಡ್ಸ್ ಇಂದು ಉಭಯ ದೇಶಗಳ(ಭಾರತ-ಬ್ರಿಟನ್‌) ಪ್ರಧಾನ ಮಂತ್ರಿಗಳ ಸಮ್ಮುಖದಲ್ಲಿ ಎಫ್‌ಟಿಎಗೆ ಸಹಿ ಹಾಕುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ಮಾತುಕತೆಯ ಭಾಗವಾಗಿ ಈ ಒಪ್ಪಂದವು ಕಳೆದ ಮೇನಲ್ಲಿ ಅಂತಿಮ ರೂಪ ಪಡೆದಿತ್ತು.

ಇದರಿಂದಾಗಿ ಬ್ರಿಟನ್‌ನ ವಿಸ್ಕಿ, ಕಾರು ಮತ್ತು ಕೆಲ ಆಹಾರ ಪದಾರ್ಥಗಳ ಮೇಲಿನ ಆಮದು ಸುಂಕವನ್ನು ಭಾರತ ಕಡಿತಗೊಳಿಸಲಿದೆ. ಇದಕ್ಕೆ ಬದಲಾಗಿ ಭಾರತದ ಜವಳಿ, ವಿದ್ಯುತ್ ಚಾಲಿತ ವಾಹನಗಳನ್ನು ಸುಂಕ ರಹಿತವಾಗಿ ಬ್ರಿಟನ್ ಪಡೆಯಬಹುದಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries