HEALTH TIPS

ತಾಲಿಬಾನ್ ಸರ್ಕಾರವನ್ನು ಮಾನ್ಯ ಮಾಡಿದ ಮೊದಲ ದೇಶ ರಷ್ಯಾ: ಇಲ್ಲಿದೆ ವಿವರ

ಕಾಬೂಲ್‌/ಮಾಸ್ಕೊ: ಮಾಸ್ಕೊದಲ್ಲಿ ತನ್ನ ರಾಯಭಾರಿಯನ್ನು ನೇಮಿಸಲು ಅಫ್ಗಾನಿಸ್ತಾನಕ್ಕೆ ಗುರುವಾರ ಒಪ್ಪಿಗೆ ನೀಡಿರುವ ರಷ್ಯಾ, ತಾಲಿಬಾನ್‌ ಆಡಳಿತವನ್ನು ಮಾನ್ಯ ಮಾಡಿದ ಮೊದಲ ರಾಷ್ಟ್ರ ಎನಿಸಿದೆ.

ರಷ್ಯಾ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಉತ್ತಮ ಅವಕಾಶಗಳಿವೆ.

ಭದ್ರತೆ, ಭಯೋತ್ಪಾದನೆ ನಿಗ್ರಹ ಹಾಗೂ ಮಾದಕ ವಸ್ತು ಕಳ್ಳಸಾಗಣೆಯನ್ನು ಹತ್ತಿಕ್ಕಲು ಕಾಬೂಲ್‌ಗೆ ಬೆಂಬಲ ನೀಡುವುದನ್ನು ಮುಂದುವರಿಸಲಿದ್ದೇವೆ. ಇಂಧನ, ಸಾರಿಗೆ, ಕೃಷಿ ಹಾಗೂ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಸಾಕಷ್ಟು ವಾಣಿಜ್ಯ ಹಾಗೂ ಆರ್ಥಿಕ ಅವಕಾಶಗಳಿವೆ ಎಂದು ಉಲ್ಲೇಖಿಸಿದೆ.

'ಇಸ್ಲಾಮಿಕ್‌ ಎಮಿರೇಟ್‌ ಆಫ್‌ ಅಫ್ಗಾನಿಸ್ತಾನಕ್ಕೆ ಅಧಿಕೃತ ಮಾನ್ಯತೆ ನೀಡುವ ಕ್ರಮವು ಉಭಯ ದೇಶಗಳ ನಡುವೆ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರ ವೃದ್ಧಿಯನ್ನು ಉತ್ತೇಜಿಸಲಿದೆ ಎಂಬುದಾಗಿ ಭಾವಿಸಿದ್ದೇವೆ' ಎಂದು ಸಚಿವಾಲಯ ತಿಳಿಸಿದೆ.

ಇದಕ್ಕೆ ಪ್ರತಿಯಾಗಿ ಅಫ್ಗಾನಿಸ್ತಾನ ವಿದೇಶಾಂಗ ಸಚಿವ ಅಮಿರ್‌ ಖಾನ್‌ ಮುತ್ತಾಕಿ, 'ರಷ್ಯಾ ತೆಗೆದುಕೊಂಡ ದಿಟ್ಟ ನಿರ್ಧಾರವನ್ನು ನಾವು ಗೌರವಿಸುತ್ತೇವೆ. ದೇವರ ದಯೆಯಿಂದ ಇದು ಇತರ ರಾಷ್ಟ್ರಗಳಿಗೂ ಮಾದರಿಯಾಗಲಿ' ಎಂದಿದ್ದಾರೆ.

20 ವರ್ಷಗಳ ಕಾಲ ಅಫ್ಗಾನಿಸ್ತಾನದಲ್ಲಿ ಬೀಡುಬಿಟ್ಟಿದ್ದ ಯುಎಸ್‌ ಸೇನಾ ಪಡೆಗಳು 2021ರ ಆಗಸ್ಟ್‌ನಲ್ಲಿ ಹೊರನಡೆದ ಬಳಿಕ ತಾಲಿಬಾನ್‌ ಅಧಿಕಾರ ಚುಕ್ಕಾಣಿ ಹಿಡಿದಿದೆ. ಆಗಿನಿಂದ ಬೇರಾವ ರಾಷ್ಟ್ರವೂ ತಾಲಿಬಾನ್‌ ಸರ್ಕಾರವನ್ನು ಮಾನ್ಯ ಮಾಡಿಲ್ಲ.

ಆದರೆ, ಚೀನಾ, ಯುಎಇ, ಉಜ್ಬೇಕಿಸ್ತಾನ ಹಾಗೂ ಪಾಕಿಸ್ತಾನ ದೇಶಗಳು ಅಫ್ಗಾನಿಸ್ತಾನದಲ್ಲಿ ರಾಯಭಾರಿಯನ್ನು ಹೊಂದಿವೆ. ಇದು, ಸರ್ಕಾರವನ್ನು ಮಾನ್ಯತೆ ಮಾಡುವತ್ತ ಇರಿಸಿರುವ ಪ್ರಮುಖ ಹೆಜ್ಜೆ ಎನ್ನಲಾಗಿದೆ.

ಅಂತರರಾಷ್ಟ್ರೀಯವಾಗಿ ಪ್ರತ್ಯೇಕವಾಗಿಯೇ ಉಳಿದಿರುವ ಅಫ್ಗಾನಿಸ್ತಾನ ಪಾಲಿಗೆ, ರಷ್ಯಾದ ನಿಲುವು ಮೈಲುಗಲ್ಲಾಗಿದೆ. ಅಫ್ಗಾನಿಸ್ತಾನದ ಕೇಂದ್ರ ಬ್ಯಾಂಕ್‌ನ ಅಪಾರ ಆಸ್ತಿಯನ್ನು ಸ್ಥಗಿತಗೊಳಿಸಿರುವ ಹಾಗೂ ಅಫ್ಗಾನಿಸ್ತಾನದ ಬ್ಯಾಂಕಿಂಗ್ ಕ್ಷೇತ್ರವು ಅಂತರರಾಷ್ಟ್ರೀಯ ಹಣಕಾಸು ವ್ಯವಸ್ಥೆಯಿಂದ ಸಂಪರ್ಕ ಕಡಿದುಕೊಳ್ಳಲು ಕಾರಣವಾದ ತಾಲಿಬಾನ್‌ನ ಹಿರಿಯ ನಾಯಕರಿಗೆ ನಿರ್ಬಂಧ ಹೇರಿರುವ ಅಮೆರಿಕವು ರಷ್ಯಾ ಕ್ರಮವನ್ನು ಸೂಕ್ಷ್ಮವಾಗಿ ಪರಿಗಣಿಸುವ ಸಾಧ್ಯತೆ ಇದೆ.

ಅಫ್ಗಾನಿಸ್ತಾನ - ರಷ್ಯಾ ಸಂಬಂಧ ವೃದ್ಧಿ
ರಷ್ಯಾ ತಾಲಿಬಾನ್‌ ಜೊತೆಗಿನ ಸಂಬಂಧವನ್ನು ನಿಧಾನವಾಗಿ ಬೆಳೆಸಿಕೊಳ್ಳುತ್ತಾ ಸಾಗಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಅಫ್ಗಾನಿಸ್ತಾನವನ್ನು ಭಯೋತ್ಪಾದನೆ ವಿರುದ್ಧ ಹೋರಾಡುವ ತನ್ನ ಮಿತ್ರ ರಾಷ್ಟ್ರ ಎಂದು ಕಳೆದ ವರ್ಷ ಹೇಳಿದ್ದರು.

ಅಫ್ಗಾನಿಸ್ತಾನವು 2022ರಿಂದ ಅನಿಲ, ತೈಲ ಹಾಗೂ ಗೋಧಿಯನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದೆ.

ತಾಲಿಬಾನ್‌ ಅನ್ನು ಭಯೋತ್ಪಾದನಾ ಸಂಘಟನೆ ಎಂದು 2003ರಲ್ಲಿ ಘೋಷಿಸಿದ್ದ ರಷ್ಯಾ, ಇದೇ ವರ್ಷ ಏಪ್ರಿಲ್‌ನಲ್ಲಿ ಆ ಪಟ್ಟಿಯಿಂದ ಕೈಬಿಟ್ಟಿದೆ. ಅಫ್ಗಾನಿಸ್ತಾನದಿಂದ ಪಶ್ಚಿಮ ಏಷ್ಯಾವರೆಗೆ ಹಲವು ದೇಶಗಳಲ್ಲಿ ನೆಲೆ ಕಂಡುಕೊಂಡಿರುವ ಇಸ್ಲಾಮಿಕ್‌ ಉಗ್ರ ಸಂಘಟನೆಗಳಿಂದ ಭದ್ರತಾ ಬೆದರಿಕೆ ಇರುವುದರಿಂದ ಕಾಬೂಲ್‌ ಜೊತೆ ಕೆಲಸ ಮಾಡುವುದು ಅತ್ಯಗತ್ಯ ಎಂದು ಪ್ರತಿಪಾದಿಸಿದೆ.

ಮಾಸ್ಕೊ ಹೊರವಲಯದ ಕ್ರಾಕಸ್ ಸಿಟಿ ಹಾಲ್‌ನಲ್ಲಿ 2024ರ ಮಾರ್ಚ್‌ನಲ್ಲಿ ಗುಂಡಿನ ದಾಳಿ ನಡೆಸಿದ್ದ ನಾಲ್ವರು ಬಂಧೂಕುಧಾರಿಗಳು, 149 ಜನರನ್ನು ಹತ್ಯೆ ಮಾಡಿದ್ದರು. ಈ ದಾಳಿಯ ಹೊಣೆಯನ್ನು ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಸಂಘಟನೆ ಹೊತ್ತುಕೊಂಡಿತ್ತು. ಈ ದಾಳಿಗೆ ಐಎಸ್‌ನ ಖೋರಸಾನ್‌ ಘಟಕವೇ ಹೊಣೆ ಎಂದು ಗುಪ್ತಚರ ಮೂಲಗಳಿಂದ ತಿಳಿದುಬಂದಿರುವುದಾಗಿ ಅಮೆರಿಕದ ಅಧಿಕಾರಿಗಳು ತಿಳಿಸಿದ್ದರು.

ಅಫ್ಗಾನಿಸ್ತಾನದಲ್ಲಿ ಐಎಸ್‌ ಅಸ್ತಿತ್ವವನ್ನು ಅಳಿಸಿ ಹಾಕುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವುದಾಗಿ ತಾಲಿಬಾನ್‌ ಹೇಳಿದೆ.

ಹೆಣ್ಣುಮಕ್ಕಳ ಹಕ್ಕು; ನಿಲುವು ಬದಲಾಗುವವರೆಗೆ ನಿರ್ಬಂಧ
ಅಫ್ಗಾನಿಸ್ತಾನದಲ್ಲಿ ಹೆಣ್ಣುಮಕ್ಕಳಿಗೆ ಪ್ರೌಢ ಶಾಲೆಗಳನ್ನು ಹಾಗೂ ವಿಶ್ವವಿದ್ಯಾಲಯಗಳನ್ನು ಮುಚ್ಚಲಾಗಿದೆ. ಪುರುಷರ ರಕ್ಷಣೆ ಇಲ್ಲದೆ ಒಂಟಿಯಾಗಿ ಓಡಾಡುವುದನ್ನೂ ನಿರ್ಬಂಧಿಸಲಾಗಿದೆ. ಹೀಗಾಗಿ, ತಾಲಿಬಾನ್‌ ಆಡಳಿತವು ಮಹಿಳೆಯರ ಹಕ್ಕುಗಳ ಕುರಿತ ತನ್ನ ನಿಲುವು ಬದಲಿಸಿಕೊಳ್ಳುವವರೆಗೆ ಅಂತರರಾಷ್ಟ್ರೀಯ ಮಾನ್ಯತೆಯನ್ನು ನಿರ್ಬಂಧಿಸಲಾಗುವುದು ಎಂದು ಪಾಶ್ಚಿಮಾತ್ಯ ರಾಷ್ಟ್ರಗಳು ಸ್ಪಷ್ಟವಾಗಿ ಹೇಳಿವೆ.

ಆದರೆ, ಇಸ್ಲಾಮಿಕ ಕಾನೂನಿನ ಚೌಕಟ್ಟಿನಲ್ಲಿ ಮಹಿಳೆಯರ ಹಕ್ಕುಗಳನ್ನು ಗೌರವಿಸುವುದಾಗಿ ತಾಲಿಬಾನ್‌ ಆಡಳಿತ ಪ್ರತಿಪಾದಿಸುತ್ತಿದೆ.

ರಷ್ಯಾ-ಅಫ್ಗಾನಿಸ್ತಾನ ರಕ್ತಸಿಕ್ತ ಇತಿಹಾಸ

ಅಫ್ಗಾನಿಸ್ತಾನದಲ್ಲಿ ಅತ್ಯಂತ ಸಂಕೀರ್ಣ ಹಾಗೂ ರಕ್ತಸಿಕ್ತ ಇತಿಹಾಸವನ್ನು ರಷ್ಯಾ ಹೊಂದಿದೆ. ಕಮ್ಯುನಿಸ್ಟ್‌ ಸರ್ಕಾರವನ್ನು ನೆಲೆಗೊಳಿಸುವ ಸಲುವಾಗಿ 1979ರ ಡಿಸೆಂಬರ್‌ನಲ್ಲಿ ಸೋವಿಯತ್‌ ಒಕ್ಕೂಟದ ಪಡೆಗಳು ಅಫ್ಗಾನಿಸ್ತಾನಕ್ಕೆ ಲಗ್ಗೆ ಇಟ್ಟಿದ್ದವು. ಅವುಗಳೊಂದಿಗೆ, ಅಮೆರಿಕ ಬೆಂಬಲಿತ ಮುಜಾಹಿದ್ದೀನ್‌ ಹೋರಾಟಗಾರರು ದೀರ್ಘಕಾಲ ಹೋರಾಟ ನಡೆಸಿದ್ದವು. ಅಂತಿಮವಾಗಿ, ಸೋವಿಯತ್‌ ನಾಯಕ ಮಿಖಾಯಿಲ್‌ ಗೋರ್ಬಚೆವ್ ಅವರು 1989ರಲ್ಲಿ ಸೇನಾಪಡೆಗಳ ವಾಪಸಾತಿಗೆ ಆದೇಶಿಸಿದ್ದರು. ಆ ಹೊತ್ತಿಗಾಗಲೇ ಸುಮಾರು 15,000 ಸೋವಿಯತ್‌ ಯೋಧರು ಮೃತಪಟ್ಟಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries