ನವದೆಹಲಿ: 'ಭಾರತದ ಮುಂದಿನ ಗಗನಯಾನಿ ದೇಶಿಯವಾಗಿ ನಿರ್ಮಿಸಿದ ಬಾಹ್ಯಾಕಾಶ ನೌಕೆಯಲ್ಲೇ ಪ‍್ರಯಾಣಿಸಲಿದ್ದಾರೆ' ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.
'ಆಯಕ್ಸಿಯಂ-4ನ ಭಾಗವಾಗಿ ಶುಭಾಂಶು ಶುಕ್ಲಾ ಅವರು ಮೂರು ವಾರಗಳ ಕಾಲ ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಪಡೆದ ಅನುಭವಗಳು ಭಾರತದ ಭವಿಷ್ಯದ ಯೋಜನೆಗೆ ಮಾರ್ಗದರ್ಶನ ಒದಗಿಸಲಿದೆ' ಎಂದು ತಿಳಿಸಿದ್ದಾರೆ.
'ಭಾರತವು ತನ್ನದೇ ಆದ ಗಗನಯಾನ ಯೋಜನೆಗೆ ಸಿದ್ಧತೆ ನಡೆಸುತ್ತಿರುವ ಈ ಸಂದರ್ಭದಲ್ಲಿ ಶುಕ್ಲಾ ಅವರ ಬಾಹ್ಯಾಕಾಶ ಯಾನ ಯಶಸ್ವಿಯಾಗಿರುವುದು ಮಹತ್ವದ್ದು' ಎಂದಿದ್ದಾರೆ.
'ಶುಕ್ಲಾ ಅವರು ಕೈಗೊಂಡಿದ್ದ ಬಾಹ್ಯಾಕಾಶಯಾನ ವಾಣಿಜ್ಯ ಉದ್ದೇಶವಾಗಿದ್ದು, ವೈಜ್ಞಾನಿಕ ಕೊಡುಗೆ ಕಡಿಮೆ ಎಂದು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಆದರೆ, ಆಯಕ್ಸಿಯಂ -4 ಯೋಜನೆಗಾಗಿ ಇಸ್ರೊ ₹550 ಕೋಟಿ ಪಾವತಿಸಿದೆ. ಇದು ಶುಕ್ಲಾ ಅವರಿಗೆ ಕೆಲವು ತಿಂಗಳವರೆಗೆ ನೀಡಿದ ತರಬೇತಿಯನ್ನೂ ಒಳಗೊಂಡಿದೆ' ಎಂದೂ ಸಚಿವರು ಸ್ಪಷ್ಟನೆ ನೀಡಿದ್ದಾರೆ.
'ಭವಿಷ್ಯದಲ್ಲಿ ಭಾರತ ಕೈಗೊಳ್ಳಲಿರುವ ಬಾಹ್ಯಾಕಾಶ ಯೋಜನೆಯು ಸಂಪೂರ್ಣ ದೇಶಿಮಯವಾಗಿರಲಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಇಂಥ ಸಾಧನೆಗೈದ ಕೆಲವೇ ರಾಷ್ಟ್ರಗಳ ಸಾಲಿಗೆ ಭಾರತವನ್ನೂ ಸೇರಿಸಲಿದೆ. ನಮ್ಮದೇ ಸ್ವಂತ ಬಾಹ್ಯಾಕಾಶ ನಿಲ್ದಾಣ ಹೊಂದುವ ಮಹತ್ವಾಕಾಂಕ್ಷೆಗೂ ಇದು ಪೂರಕ' ಎಂದಿದ್ದಾರೆ.
'2035ರ ವೇಳೆಗೆ ಭಾರತ ತನ್ನದೇ ಸ್ವಂತ ಬಾಹ್ಯಾಕಾಶ ನಿಲ್ದಾಣ ಹೊಂದಲು ಸಾಧ್ಯವಾಗಲಿದೆ. ಅದಕ್ಕೆ 'ಭಾರತ್ ಸ್ಪೇಸ್ ಸ್ಟೇಷನ್' ಎಂದು ಹೆಸರಿಡಲು ನಾವು ನಿರ್ಧರಿಸಿದ್ದೇವೆ. ಕಾರ್ಯಾಚರಣೆ ಆರಂಭವಾದ ಬಳಿಕ ವಿದೇಶಿ ಪ್ರಯೋಗಗಳಿಗೂ ಅವಕಾಶ ನೀಡಲಾಗುವುದು' ಮಾಹಿತಿ ನೀಡಿದ್ದಾರೆ.
ಅಲ್ಲದೇ,'ಚಂದ್ರಯಾನ-3ರ ಯಶಸ್ಸು, ಶುಕ್ಲಾ ಅವರ ಬಾಹ್ಯಾಕಾಶ ಪಯಣ ಮತ್ತು ಭಾರತ ದೇಶಿಯವಾಗಿ ಕೈಗೊಳ್ಳುತ್ತಿರುವ ಪ್ರಯೋಗಗಳು ಸವಾಲುಗಳನ್ನು ಎದುರಿಸಲು ಭಾರತ ಸಜ್ಜಾಗಿದೆ ಎಂಬ ಸ್ಪಷ್ಟ ಸಂದೇಶವನ್ನು ಇಡೀ ಜಗತ್ತಿಗೆ ನೀಡಿದೆ' ಎಂದೂ ಜಿತೇಂದ್ರ ಸಿಂಗ್ ಪ್ರತಿಪಾದಿಸಿದ್ದಾರೆ.
ಪುತ್ರನನ್ನು ಅಪ್ಪಿದ ಶುಭಾಂಶು
ಪುನರಾಗಮನಕ್ಕೆ ಸಂಭ್ರಮಾಚರಣೆ'
ಲಖನೌ: 'ಶುಭಾಂಶು ಯಶಸ್ಸಿನ ಬಗ್ಗೆ ಸಾರ್ವಜನಿಕರ ಪ್ರತಿಕ್ರಿಯೆ ಕಂಡು ಮನಸ್ಸು ತುಂಬಿ ಬಂದಿದೆ. ಮಗ ಲಖನೌಗೆ ಬರಲು ಇನ್ನೂ ಸ್ವಲ್ಪ ಸಮಯ ಬೇಕಾಗುತ್ತದೆ. ಆತ ಬಂದಾಗ ದೊಡ್ಡಮಟ್ಟದ ಸಂಭ್ರಮಾಚರಣೆ ನಡೆಯಲಿದೆ' ಎಂದು ಶುಭಾಂಶು ಅವರ ತಂದೆ ಶಂಭು ದಯಾಳ್ ಹೇಳಿದ್ದಾರೆ. 'ಶುಭಾಂಶು ಜತೆಗೆ ದೂರವಾಣಿ ಮೂಲಕ ಮಾತನಾಡಿದೆ. ಬಾಹ್ಯಾಕಾಶ ಯೋಜನೆ ಯಶಸ್ವಿಯಾಗಿದ್ದರ ಬಗ್ಗೆ ಬಹಳ ಸಂತಸದಿಂದ ಆತ ಮಾತನಾಡಿದ್ದಾನೆ' ಎಂದು ತಿಳಿಸಿದ್ದಾರೆ. 'ಭೂಮಿಯ ವಾತಾವರಣಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯಬೇಕು ಎಂಬುದಾಗಿಯೂ ಶುಭಾಂಶು ತಿಳಿಸಿದ್ದಾನೆ' ಎಂದಿದ್ದಾರೆ.




