ಕಾಸರಗೋಡು: ಉತ್ತರ ಕೇರಳ ಮತ್ತು ದಕ್ಷಿಣ ಕರ್ನಾಟಕದಲ್ಲಿ ನಾಡಿನ ಸಾಮರಸ್ಯಕ್ಕೆ ಮಹತ್ವದ ಕೊಡುಗೆ ನೀಡಿದವರಲ್ಲಿ ಮಾಜಿ ಸಚಿವ ಚೆರ್ಕಳಂ ಅಬ್ದುಲ್ಲ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಖ್ಯಾತ ಚಿತ್ರಕಲಾವಿದ ಪಿ.ಎಸ್. ಪುಣಿಚಿತ್ತಾಯ ಹೇಳಿದ್ದಾರೆ.
ಅವರು ತಮ್ಮ ನಿವಾಸ ಕಾಂಚನ ಗಂಗಾ ಕಲಾ ಗ್ರಾಮದಲ್ಲಿ ಚೆರ್ಕಳಂ ಅಬ್ದುಲ್ಲಾ ಫೌಂಡೇಶನ್ ವತಿಯಿಂದ ತಮಗೆ ನೀಡಿದ ಗೌರಬಾರ್ಪಣೆ ಸ್ವೀಕರಿಸಿ ಮಾತನಾಡಿದರು. ಧರ್ಮ ಅಥವಾ ಜಾತಿ ಪರಿಗಣಿಸದೆ, ಸಮಸ್ತ ಜನತೆಯ ಅಭಿಪ್ರಾಯಕ್ಕೆ ಮನ್ನಣೆ ನೀಡುತ್ತಿದ್ದ ಚೆರ್ಕಳಂ ಅವರು ಸಚಿವರಾಗಿ ರಾಜ್ಯದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿರುವುದಾಗಿ ತಿಳಿಸಿದರು.
ಖ್ಯಾತ ಸಾಮಾಜಿಕ ಕಾರ್ಯಕರ್ತ ಟಿ.ಎಂ. ಶಹೀದ್ ಸುಳ್ಯ ಸಮಾರಂಭ ಉದ್ಘಾಟಿಸಿ ಪುಣಿಂಚಿತ್ತಾಯ ದಂಪತಿಯನ್ನು ಸನ್ಮಾನಿಸಿದರು. ಪ್ರತಿಷ್ಠಾನದ ಅಧ್ಯಕ್ಷ ನಾಸರ್ ಚೆರ್ಕಳಂ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಅಮೀರ್ ಪಳ್ಳಿಯನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಖ್ಯಾತ ಇತಿಹಾಸಕಾರ ಡಾ. ಸಿ. ಬಾಲನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಿ. ಅಹ್ಮದ್ ಕಬೀರ್ ಚೆರ್ಕಳ ಮತ್ತು ಸಿ. ಎಚ್. ನೌಶಾದ್ ಚೆರ್ಕಳ ಉಪಸ್ಥಿತರಿದ್ದರು. ಪ್ರತಿಷ್ಠಾನದ ಕಾರ್ಯದರ್ಶಿ ಮುಹಮ್ಮದ್ ಯಾಸರ್ ವಾಫಿ ಸ್ವಾಗತಿಸಿದರು. ಕಾರ್ಯದರ್ಶಿ ಕರೀಂ ಚೌಕಿ ವಂದಿಸಿದರು.


