ಪಣಜಿ: ರೆಂಟಲ್ ಕಾರುಗಳನ್ನು (ಬಾಡಿಗೆ ಕಾರುಗಳು) ತೆಗೆದುಕೊಂಡು ಹೋಗುವವರಿಂದಲೇ ಗೋವಾದಲ್ಲಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುತ್ತಿವೆ ಎಂದು ಸಾರಿಗೆ ಸಚಿವ ಮೌವಿನ್ ಗೊಡಿನ್ಹೋ ಅಲ್ಲಿನ ವಿಧಾನಸಭೆಗೆ ಸ್ಪಷ್ಟಪಡಿಸಿದ್ದಾರೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಅವರು, ಗೋವಾದಲ್ಲಿ ರೆಂಟಲ್ ಕಾರುಗಳ ಹಾವಳಿ ಹೆಚ್ಚಾಗಿದೆ.
ಹೀಗಾಗಿಯೇ ನಮ್ಮ ರಾಜ್ಯದಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.
ಗೋವಾದಲ್ಲಿ ಶೇ 95 ರಷ್ಟು ಮೊಬೈಲ್ ಆಯಪ್ ಆಧಾರಿತ ರೆಂಟಲ್ ಕಾರುಗಳನ್ನು ಬಳಸುತ್ತಿದ್ದಾರೆ. ಗೋವಾದಲ್ಲಿ ಎಲ್ಲಿಯೇ ಹೋದರೂ ಸುಲಭವಾಗಿ ರೆಂಟಲ್ ಕಾರುಗಳು ಸಿಗುತ್ತಿವೆ ಎಂದು ವಿವರಿಸಿದ್ದಾರೆ.
ಈ ನಿಟ್ಟಿನಲ್ಲಿ ರೆಂಟಲ್ ಕಾರುಗಳ ಬಗ್ಗೆ ಕ್ರಮ ಕೈಗೊಳ್ಳಲು ಗೋವಾ ಸಾರಿಗೆ ಇಲಾಖೆ ಹೊಸ ಮಾರ್ಗಸೂಚಿಗಳ ಕರಡನ್ನು ಸಿದ್ಧಪಡಿಸಿದೆ. ಅದನ್ನು ಟ್ರಾವೆಲ್ ಏಜನ್ಸಿಗಳ ಜೊತೆ ಸಭೆ ಮಾಡಿ ಅಂತಿಮಗೊಳಿಸಲಾಗುವುದು ಎಂದು ಹೇಳಿದ್ದಾರೆ.




