ಮೆಂಧರ್/ ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಭಯೋತ್ಪಾದಕರ ಅಡಗುತಾಣವನ್ನು ಪತ್ತೆಮಾಡಿರುವ ಭದ್ರತಾ ಪಡೆಗಳು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಕ್ಕೆ ಪಡೆದಿವೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಸುರನಕೋಟ್ ಅರಣ್ಯದಲ್ಲಿ ಪೊಲೀಸರು ಮತ್ತು ಸೇನೆ ನಡೆಸಿದ ಜಂಟಿ ಶೋಧ ಕಾರ್ಯಾಚರಣೆಯ ವೇಳೆ ಈ ಅಡಗುತಾಣ ಪತ್ತೆಯಾಗಿದೆ ಎಂದು ಅವರು ಹೇಳಿದ್ದಾರೆ.
ಕಾರ್ಯಾಚರಣೆ ವೇಳೆ ಯಾರನ್ನೂ ಬಂಧಿಸಿಲ್ಲ. ಅಡಗುತಾಣದಲ್ಲಿದ್ದ ಮೂರು ಹ್ಯಾಂಡ್ ಗ್ರೆನೇಡ್‌ಗಳು, ರೈಫಲ್, ಪಿಸ್ತೂಲ್, ಒಂದು ವೈರ್ ಕಟ್ಟರ್, ಚಾಕು, ಡಾಟಾ ಕೇಬಲ್ ಕನೆಕ್ಟರ್, ಐದು ಪೆನ್ಸಿಲ್ ಸೆಲ್‌ಗಳು, ಕಬ್ಬಿಣದ ರಾಡ್ ಮತ್ತು ಒಂದು ಬಣ್ಣದ ಡಬ್ಬಿಯನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.




