HEALTH TIPS

'ಪವಿತ್ರ ಜಲ' ಎಂದು ಮಲೇಷ್ಯಾದಲ್ಲಿ ಭಾರತದ ಪೂಜಾರಿ ಮಾಡಿದ ಕಿತಾಪತಿ! ಮಾಡೆಲ್ ಅಳಲು

ಕೌಲಾಂಪುರ: ಮಲೇಷ್ಯಾದ ಹಿಂದೂ ದೇವಸ್ಥಾನದಲ್ಲಿ ಭಾರತ ಮೂಲದ ಪೂಜಾರಿಯೊಬ್ಬ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಮಲೇಷ್ಯಾದ ನಟಿ ಹಾಗೂ ಮಾಡೆಲ್ ಲಿಶಾಲಿನಿ ಕನಾರಣ್ ಎಂಬುವರು ಆರೋಪಿಸಿದ್ದಾರೆ.

ನಟಿಯ ಈ ಆರೋಪವು ಮಲೇಷ್ಯಾದಲ್ಲಿ ತಲ್ಲಣ ಸೃಷ್ಟಿಸಿದ್ದು ಅಲ್ಲಿನ ಪೊಲೀಸರು ಪರಾರಿಯಾಗಿರುವ ಪೂಜಾರಿಗೆ ಹುಡುಕಾಟ ನಡೆಸುತ್ತಿದ್ದಾರೆ.

ಈ ಕುರಿತು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್, ಮಲಯಾ ಮೇಲ್ ಸೇರಿದಂತೆ ಹಲವು ಅಂತರರಾಷ್ಟ್ರೀಯ, ರಾಷ್ಟ್ರೀಯ ಸುದ್ದಿ ಮಾಧ್ಯಮಗಳ ವೆಬ್‌ಸೈಟ್‌ಗಳಲ್ಲಿ ವರದಿಗಳು ಪ್ರಕಟವಾಗಿವೆ.

ಮಲೇಷ್ಯಾದ ಸೆಲಾಂಗೋರ್ ರಾಜ್ಯದ ಸೆಪಾಂಗ್ ಜಿಲ್ಲೆಯ ಸಲಾಕ್ ಬಳಿಯ ಮಾರಿಯಮ್ಮನ್ ದೇವಸ್ಥಾನದ ಪೂಜಾರಿ ಈ ಕೃತ್ಯ ಎಸಗಿರುವುದಾಗಿ ಆರೋಪಿಸಲಾಗಿದೆ

ತಮ್ಮ ಮೇಲೆ ನಡೆದಿರುವ ದೌರ್ಜನ್ಯದ ಬಗ್ಗೆ ಸ್ವತಂ ಲಿಶಾಲಿನಿ ಕನಾರಣ್ ಅವರು ತಮ್ಮ ವೆರಿಫೈಡ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

''ಆ ಆಘಾತದಿಂದ ಇನ್ನೂ ಹೊರಬಂದಿಲ್ಲ''

''ನಾನು ಇತ್ತೀಚೆಗೆ ಸೆಪಾಂಗ್‌ನ ಮಾರಿಯಮ್ಮನ್ ದೇವಸ್ಥಾನಕ್ಕೆ ಹೋಗುವುದನ್ನು ರೂಡಿಸಿಕೊಂಡಿದ್ದೆ. ಜೂನ್ 21 ರಂದು ಮಾರಿಯಮ್ಮನ್ ದೇವಸ್ಥಾನಕ್ಕೆ ಹೋಗಿದ್ದಾಗ ಆಕಸ್ಮಿಕವಾಗಿ ಅಲ್ಲಿನ ಪೂಜಾರಿಯನ್ನು ಭೇಟಿಯಾಗಿದ್ದೆ. ಅಂದು ಶನಿವಾರ ಆಗಿದ್ದರಿಂದ ಭಕ್ತರು ಹೆಚ್ಚಿದ್ದರು. ನಿಮ್ಮ ಜೊತೆ ವಿಶೇಷವಾಗಿ ಮಾತನಾಡುತ್ತೇನೆ ಎಂದು ಆ ಪೂಜಾರಿ ನನ್ನನ್ನು ಕೂರಿಸಿಕೊಂಡರು. ಭಕ್ತರು ಹೊರಟುಹೋದ ಬಳಿಕ ನೀರಿನ ಹನಿಗಳನ್ನು ಪ್ರೋಕ್ಷಣೆ ಮಾಡಿ ನನ್ನನ್ನು ಕೊಠಡಿಗೆ ಬರಲು ಹೇಳಿದರು. ಅಲ್ಲಿವರೆಗೂ ನಾನು ಸಹಜವಾಗಿಯೇ ಅವರನ್ನು ನಂಬಿ ಅವರ ಹಿಂದೆ ಹೋದೆ. ಅಲ್ಲಿಯೂ ಕೆಲ ಭಕ್ತರು ಕೂತಿದ್ದರು. ಮತ್ತೆ ನನಗೆ ಕಾಯಲು ಹೇಳಿದ ಪೂಜಾರಿ, ಸುಮಾರು ಒಂದೂವರೆ ಗಂಟೆಯ ನಂತರ ಎಲ್ಲ ಭಕ್ತರು ಹೋದ ಮೇಲೆ ನನ್ನ ಜೊತೆ ಆತ್ಮೀಯವಾಗಿ ಮಾತನಾಡಲು ಶುರು ಮಾಡಿದರು. ನಂತರ ನನ್ನ ಹತ್ತಿರ ಬಂದು, ವಿಚಿತ್ರ ವಾಸನೆ ಹೊಂದಿದ್ದ ಜಲವನ್ನು ನನ್ನ ಮೇಲೆ ಸಿಂಪಡಿಸಲು ಶುರು ಮಾಡಿದರು. ಇದೇನು ಎಂದು ಕೇಳಿದ್ದಕ್ಕೆ, 'ಇದನ್ನು ಭಾರತದಿಂದ ತಂದಿದ್ದೇನೆ. ಇದನ್ನು ನಿನ್ನಂಥಹ ವಿಶೇಷ ವ್ಯಕ್ತಿಗಳಿಗೆ ಮಾತ್ರ ಚಿಮುಕಿಸುತ್ತೇನೆ, ಇದು ನಿನ್ನ ಒಳ್ಳೆಯದಕ್ಕೆ' ಎಂದು ಹೇಳಿದರು. ಅದರಿಂದ ನನ್ನ ಕಣ್ಣುಗಳು ಉರಿಯಲು ಶುರು ಮಾಡಿದವು. ಅಲ್ಲಿಂದ ಮತ್ತೆ ಅವರು ವಿಚಿತ್ರವಾಗಿ ವರ್ತಿಸಲು ಶುರು ಮಾಡಿದರು. 'ನಿನಗೆ ವಿಶೇಷ ಆಶೀರ್ವಾದ ಮಾಡುತ್ತೇನೆ, ನೀನು ತೊಟ್ಟಿರುವ ಮೇಲಂಗಿಯನ್ನು (ಪಂಜಾಬಿ ಸೂಟ್) ತೆಗೆ ಎಂದು ಹೇಳಿದರು. ನನಗೆ ಆಗ ಒಂದು ಕ್ಷಣ ಶಾಕ್‌ ಆಗಿ 'ಇಲ್ಲ ಅದು ತುಂಬಾ ಬಿಗಿಯಾಗಿದೆ' ಎಂದು ಹೇಳಿದೆ. ಆಗ ಆ ಪೂಜಾರಿ ಮೈಮೇಲೆ ದೇವರು ಬಂದ ಹಾಗೇ ನನಗೆ ಗದರಲು ಶುರು ಮಾಡಿದ. ಮೇಲಂಗಿಯನ್ನು ಎತ್ತಿ ನನ್ನ ರವಿಕೆಯೊಳಗೆ ಕೈ ಹಾಕಲು ಪ್ರಯತ್ನಿಸಿದ. ಇದನ್ನು ನಾನು ವಿರೋಧಿಸಿದೆ. ಏನಾಗುತ್ತಿದೆ ಎಂಬುದು ನನಗೆ ಗೊತ್ತಾಯಿತು. ಇದರಿಂದ ನನಗೆ ತೀವ್ರ ದಿಗಿಲಾಯಿತು. ಇಂತಹ ದೌರ್ಜನ್ಯವನ್ನು ನಾನು ಮೊದಲ ಬಾರಿ ಅನುಭವಿಸಿದೆ. ಆ ದಿನ ಮನೆಗೆ ಹೋದ ನಂತರ ಆ ಕಹಿ ಘಟನೆಯಿಂದ ನನಗೆ ಹೊರಬರಲಾಗಲಿಲ್ಲ. ನಿದ್ರೆಯೂ ಬರಲಿಲ್ಲ. ಒಬ್ಬಳೇ ಕೂತು ಅಳುತಿದ್ದೆ. ಅದರಿಂದ ನನಗೆ ಅಷ್ಟೊಂದು ಆಘಾತವಾಗಿತ್ತು. ಆ ಆಘಾತದಿಂದ ಇನ್ನೂ ಹೊರಬಂದಿಲ್ಲ'' ಎಂದು ನೊಂದುಕೊಂಡಿದ್ದಾರೆ.

ಮುಂದುವರೆದು, ''ಭಾರತದಲ್ಲಿದ್ದ ನನ್ನ ತಾಯಿ ಹಾಗೂ ಸಹೋದರರು ವಾಪಸ್ ಮಲೇಷ್ಯಾಕ್ಕೆ ಬಂದ ನಂತರ ಆದ ಆ ಘಟನೆಯನ್ನು ಅವರ ಬಳಿ ಹೇಳಿಕೊಂಡೆ. ಅವರು 'ಪೊಲೀಸ್‌ಗೆ ದೂರು ನೀಡೋಣ, ಆ ದೇವಸ್ಥಾನಕ್ಕೆ ಹೋಗಿ ಮಾತನಾಡೋಣ' ಎಂದು ಧೈರ್ಯ ನೀಡಿದರು. ದೂರು ನೀಡುವ ಮುನ್ನ ದೇವಸ್ಥಾನಕ್ಕೆ ಹೋಗಿ ವಿಚಾರಿಸಿದಾಗ, ಲೈಂಗಿಕ ದೌರ್ಜನ್ಯ ನಡೆಸಿದ ಪೂಜಾರಿ ಅಲ್ಲಿರಲಿಲ್ಲ. ದೇವಸ್ಥಾನದ ಅಧ್ಯಕ್ಷರ ಬಳಿ ವಿಚಾರಿಸಿದಾಗ, 'ನಾವು ಆ ಪೂಜಾರಿಯನ್ನು ನೋಡಿಕೊಳ್ಳುತ್ತೇವೆ. ನೀವು ಈ ಘಟನೆ ಬಗ್ಗೆ ಸೋಶಿಯಲ್ ಮೀಡಿಯಾ ಹಾಗೂ ಇನ್ನಿತರ ಕಡೆ ಚರ್ಚೆ ಮಾಡಬೇಡಿ, ದೇವಸ್ಥಾನ ಹೆಸರನ್ನು ಬಹಿರಂಗ ಮಾಡಬೇಡಿ' ಎಂದು ಒತ್ತಾಯ ಮಾಡಿದ್ದಾರು. ಆದರೆ, ಈ ರೀತಿಯ ಘಟನೆಗಳು ಮರುಕಳಿಸದಿರಲಿ ಎಂದು ನನ್ನ ತಾಯಿ ಮೂಲಕ ಸೆಪಾಂಗ್ ಪೊಲೀಸ್ ಇಲಾಖೆಯ ಡಿಸಿಪಿ ಅವರಿಗೆ ದೂರು ನೀಡಲಾಯಿತು'' ಎಂದು ಲಿಶಾಲಿನಿ ಬರಹದ ಮೂಲಕ ನೋವು ತೋಡಿಕೊಂಡಿದ್ದಾರೆ.

''ಹೌದು ನನಗೆ ಆಘಾತವಾಗಿದೆ. ಇನ್ನೂ ಚೇತರಿಸಿಕೊಂಡಿಲ್ಲ.. ಪ್ರತಿದಿನ ನಿದ್ದೆ ಬರುತ್ತಿಲ್ಲ. ನನಗೆ ತೀವ್ರ ಅಸಹ್ಯವೆನಿಸಿದೆ. ಆ ವ್ಯಕ್ತಿ ಹಾಗೇಕೆ ಮಾಡಿದ? ಇದು ಎಂದಿಗೂ ಮರೆಯುವಂತದಲ್ಲ'' ಎಂದು ಕೊನೆಯಲ್ಲಿ ಹೇಳಿಕೊಂಡಿದ್ದಾರೆ.

ಈ ಪ್ರಕರಣದ ಬಗ್ಗೆ 'ಮಲಯಾ ಮೇಲ್' ಮಾಧ್ಯಮ ಪೊಲೀಸರ ಪ್ರತಿಕ್ರಿಯೆ ಹೇಳಿಕೆಯನ್ನು ಉಲ್ಲೇಖಿಸಿದೆ. ''ಪ್ರಕರಣ ದಾಖಲಾಗಿರುವುದು ನಿಜ. ತನಿಖೆ ಆರಂಭಿಸಲಾಗಿದೆ. ದೇವಸ್ಥಾನಕ್ಕೆ ಹೋಗಿ ವಿಚಾರಿಸಿದಾಗ ಆ ಪೂಜಾರಿ ಪರಾರಿಯಾಗಿರುವುದು ತಿಳಿದು ಬಂದಿದೆ. ಸದ್ಯ ಆತ ದೇಶದಲ್ಲಿಲ್ಲ. ಆ ದೇವಸ್ಥಾನದ ಮುಖ್ಯ ಪೂಜಾರಿ ಕೆಲ ದಿನಗಳಿಂದ ವಿದೇಶಕ್ಕೆ ಹೋಗಿರುವುದರಿಂದ ಕೆಲದಿನಗಳ ಹಿಂದೆ ಆರೋಪಿ ಪೂಜಾರಿ ದೇವಸ್ಥಾನಕ್ಕೆ ಬಂದು ಪೂಜಾ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದ'' ಎಂದು ವರದಿ ಮಾಡಿದೆ.

ಲಿಶಾಲಿನಿ ಕನಾರಣ್ ಅವರು Miss Grand Malaysia 2021 ಸೌಂದರ್ಯ ಸ್ಪರ್ಧೆ ವಿಜೇತೆ ಹಾಗೂ ಇವರು ಭಾರತ ಮೂಲದವರು ಎಂದು ಹೇಳಲಾಗಿದೆ. ಲಿಶಾಲಿನಿ ವೆಬ್ ಸಿರೀಸ್, ಸಿನಿಮಾಗಳಲ್ಲಿ ನಟಿಸುತ್ತಾರೆ. ಈ ಕುರಿತು ಅವರು ತಮ್ಮ ಇನ್‌ಸ್ಟಾ ಖಾತೆಯಲ್ಲಿ ಇತ್ತೀಚಿನ ಸಿನಿಮಾ ವೆಬ್ ಸಿರೀಸ್‌ಗಳ ಟ್ರೇಲರ್‌ಗಳನ್ನೂ ಹಂಚಿಕೊಂಡಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries