HEALTH TIPS

ಭಾರತದ ವಿಮಾನಯಾನ ಸಂಸ್ಥೆಗಳಿಗೆ ಪ್ರಯಾಣಿಕರ ಹಿತಕ್ಕಿಂತ ಪ್ರಚಾರವೇ ಮುಖ್ಯ: ಸಮೀಕ್ಷೆ

ಮುಂಬೈ: ಭಾರತದಲ್ಲಿರುವ ಬಹುತೇಕ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರ ಸುರಕ್ಷತೆಗಿಂತ ಹೆಚ್ಚಾಗಿ ಪ್ರಚಾರಕ್ಕೆ ದುಡ್ಡು ಖರ್ಚು ಮಾಡುವುದೇ ಹೆಚ್ಚು ಎಂದು ದೇಶದಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ಶೇ 76ರಷ್ಟು ಜನರು ಪ್ರತಿಕ್ರಿಯಿಸಿದ್ದಾರೆ.

ಈ ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ 64ರಷ್ಟು ಜನರ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ ಒಮ್ಮೆಯಾದರೂ ವಿಮಾನ ಏರಲು ಕಷ್ಟಪಡುವ, ಸಮರ್ಪಕವಾಗಿ ಇಳಿಯದ ಅಥವಾ ವಿಮಾನದೊಳಗಿನ ಕೆಟ್ಟ ಪರಿಸ್ಥಿತಿಯಂತ ಕಹಿ ಅನುಭವಗಳನ್ನು ಎದುರಿಸಿದ್ದಾರೆ ಎಂದು ಲೋಕಲ್‌ಸರ್ಕಲ್‌ ನಡೆಸಿದ ಸಮೀಕ್ಷೆಯಲ್ಲಿ ಹೇಳಲಾಗಿದೆ.

ದೇಶದ 32 ಜಿಲ್ಲೆಗಳಿಂದ ಈ ಸಮೀಕ್ಷೆಯು ಒಟ್ಟು 44 ಸಾವಿರ ಪ್ರತಿಕ್ರಿಯೆಗಳನ್ನು ಸಂಗ್ರಹಿಸಿತ್ತು. ಇವುಗಳಲ್ಲಿ ವಿಮಾನಗಳಲ್ಲಿ ಪ್ರಯಾಣಿಕರು ಅನುಭವಿಸಿದ ತೊಂದರೆಗಳನ್ನು ದಾಖಲಿಸಿದ್ದಾರೆ. ಇದರಲ್ಲಿ ಪ್ರಮುಖವಾಗಿ ಅಹಮದಾಬಾದ್‌ನಲ್ಲಿ ದುರಂತಕ್ಕೀಡಾಗಿ 260 ಜನರ ಸಾವಿಗೆ ಕಾರಣವಾದ ಟಾಟಾ ಸಮೂಹದ ಏರ್ ಇಂಡಿಯಾಗೆ ಸೇರಿದ ಬೋಯಿಂಗ್ 787-8 ಡ್ರೀಮ್‌ಲೈನರ್‌ ಕೂಡಾ ಸೇರಿದೆ.

ಈ ಘಟನೆಗೆ ಸಂಬಂಧಿಸಿದಂತೆ ವಿಮಾನಗಳ ಅಪಘಾತ ತನಿಖಾ ಸಂಸ್ಥೆಯು (AAIB) ತನಿಖೆ ಕೈಗೊಂಡು, ಪ್ರಾಥಮಿಕ ವರದಿ ಸಲ್ಲಿಸಿದೆ. ಕೊಚ್ಚಿ-ಮುಂಬೈ ಮಾರ್ಗದ ವಿಮಾನವು ಕಳೆದ ಸೋಮವಾರ ರನ್‌ವೇನಿಂದ ಜಾರಿದ ಪರಿಣಾಮ, ವಿಮಾನಕ್ಕೆ ತೀವ್ರ ಹಾನಿಯಾಗಿತ್ತು. ಇದು ಆತಂಕಕ್ಕೂ ಕಾರಣವಾಗಿತ್ತು. ಅದೇ ದಿನ ಕೋಲ್ಕತ್ತ ಹಾಗೂ ದೆಹಲಿ ಮಾರ್ಗದ ವಿಮಾನದಲ್ಲಿ ಕೊನೇ ಕ್ಷಣದಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದರಿಂದ ಹಾರಾಟ ರದ್ದಾಯಿತು. ಇಂಡಿಗೊಗೆ ಸೇರಿದ ವಿಮಾನದಲ್ಲಿ ಲ್ಯಾಂಡಿಂಗ್ ಗೇರ್‌ನಲ್ಲಿ ಸಮಸ್ಯೆ ಕಂಡುಬಂದಿದ್ದರಿಂದ ಗೋವಾದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು.

ಗೋವಾ ಹಾಗೂ ಪುಣೆ ಮಾರ್ಗದ ಸ್ಪೈಸ್‌ಜೆಟ್‌ ವಿಮಾನ ಹಾರಾಟ ಸಂದರ್ಭದಲ್ಲೇ ಹೊರಭಾಗದ ಕಿಟಕಿ ಚೌಕಟ್ಟಿನಲ್ಲಿ ಸಮಸ್ಯೆ ಎದುರಾಗಿ ಆತಂಕ ಸೃಷ್ಟಿಯಾಗಿತ್ತು.

'ಭಾರತೀಯ ಮೂಲದ ವಿಮಾನಯಾನ ಸಂಸ್ಥೆಗಳು ಸುರಕ್ಷತೆಗಿಂತ ಪ್ರಚಾರಕ್ಕೆ ಹೆಚ್ಚು ಹಣ ಖರ್ಚು ಮಾಡುತ್ತದೆಯೇ?' ಎಂಬ ಪ್ರಶ್ನೆಯನ್ನು ಸಮೀಕ್ಷೆಯಲ್ಲಿ ಕೇಳಲಾಗಿತ್ತು.

ಇದಕ್ಕೆ 26,696 (ಶೇ 43ರಷ್ಟು) ಜನ 'ಹೌದು' ಎಂದು ಉತ್ತರಿಸಿದ್ದಾರೆ. ಶೇ 33ರಷ್ಟು ಜನ 'ಹೌದು, ಕೆಲವು ವಿಮಾನಯಾನ ಸಂಸ್ಥೆಗಳು' ಎಂದು ಹೇಳಿದ್ದಾರೆ. ಶೇ 11ರಷ್ಟು ಜನ 'ಇಲ್ಲ, ಯಾವ ಸಂಸ್ಥೆಯೂ ಹಾಗಿಲ್ಲ' ಎಂದಿದ್ದಾರೆ. ಶೇ 13ರಷ್ಟು ಜನ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಸಮೀಕ್ಷೆಯ ಒಟ್ಟು ಸಾರಾಂಶದಲ್ಲಿ ಶೇ 76ರಷ್ಟು ಜನರು ತಮ್ಮ ಪ್ರತಿಕ್ರಿಯೆಯಲ್ಲಿ ಸುರಕ್ಷತೆಯ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಶೇ 63ರಷ್ಟು ಜನ ಪುರುಷರು ಹಾಗೂ ಶೇ 37ರಷ್ಟು ಜನ ಮಹಿಳೆಯರು ಪಾಲ್ಗೊಂಡಿದ್ದರು.

ಸಮೀಕ್ಷೆಯಲ್ಲಿ ಮಹಾನಗರಗಳ ಶೇ 46ರಷ್ಟು, ನಗರ ಪ್ರದೇಶಗಳ ಶೇ 25ರಷ್ಟು ಹಾಗೂ ಪಟ್ಟಣ ಮತ್ತು ಗ್ರಾಮೀಣ ಭಾಗದ ಶೇ 29ರಷ್ಟು ಜನ ಪಾಲ್ಗೊಂಡಿದ್ದರು ಎಂದು ಸಂಸ್ಥೆ ಹೇಳಿದೆ.

ಕಳೆದ ಮೂರು ವರ್ಷಗಳಲ್ಲಿ ಯಾವ ವಿಮಾನಯಾನ ಸಂಸ್ಥೆಗಳಿಗೆ ಸೇರಿದ ವಿಮಾನದಲ್ಲಿ ಭಯಾನಕ ಎನ್ನಿಸುವ, ಎದೆ ಝಲ್ ಎನಿಸುವಂತ ಟೇಕ್‌ಆಫ್‌, ಪ್ರಯಾಣದ ಅನುಭವ ಹಾಗೂ ಲ್ಯಾಂಡಿಂಗ್‌ ಅನುಭವಿಸಿದ್ದೀರಿ ಎಂಬ ಪ್ರಶ್ನೆ ಕೇಳಲಾಗಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ 17,630 ಜನರಲ್ಲಿ ಶೇ 75ರಷ್ಟು ಮಂದಿಯ ಪ್ರಕಾರ, 'ದೇಶದಲ್ಲಿ ಕಾರ್ಯಾಚರಣೆ ನಡೆಸುವ ವಿಮಾನಗಳಲ್ಲಿ ಶೇ 50ರಷ್ಟು ವಿಮಾನಗಳಲ್ಲಿ ಇಂಥ ಕೆಟ್ಟ ಅನುಭವವಾಗಿದೆ ಎಂದಿದ್ದಾರೆ. ಶೇ 6ರಷ್ಟು ಜನರು ಶೇ 40ರಿಂದ 50ರಷ್ಟು ವಿಮಾನಗಳಲ್ಲಿ, ಶೇ 6 ರಷ್ಟು ಜನ ಶೇ 30ರಿಂದ 40ರಷ್ಟು ವಿಮಾನಗಳಲ್ಲಿ, ಶೇ 9ರಷ್ಟು ಜನ ಶೇ 10ರಿಂದ 20ರಷ್ಟು ವಿಮಾನಗಳಲ್ಲಿ ಇಂಥ ಅನುಭವ ಆಗಿದೆ ಎಂದಿದ್ದಾರೆ ಎಂದು ಲೋಕಲ್‌ಸರ್ಕಲ್ ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries