HEALTH TIPS

ಚೀನಾದ ಸಾಲ ಜಾಲದ ರಾಜತಾಂತ್ರಿಕತೆ: ಸೂಕ್ಷ್ಮವಾಗಿ ಟೀಕಿಸಿದ ಪ್ರಧಾನಿ ಮೋದಿ

ನವದೆಹಲಿ: 5 ದೇಶಗಳ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಘಾನಾ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಆಫ್ರಿಕಾದಲ್ಲಿ ಬೇಡಿಕೆಗೆ ಅನುಗುಣವಾಗಿ ಅಭಿವೃದ್ಧಿ ಯೋಜನೆಗಳಿಗೆ ಭಾರತ ಬೆಂಬಲ ನೀಡುತ್ತಿದೆ. ಸ್ವಾವಲಂಬಿ ಪರಿಸರ ವ್ಯವಸ್ಥೆಗಳನ್ನು ನಿರ್ಮಿಸುವತ್ತ ಗಮನಹರಿಸುತ್ತಿದೆ ಎಂದು ಹೇಳಿದ್ದಾರೆ.

ಇದೇವೇಳೆ, ಏಷ್ಯಾದ ಬಹುದೊಡ್ಡ ಸಾಲದಾತ ದೇಶ ಚೀನಾದ ಸಾಲ ಬಲೆಯ ರಾಜತಾಂತ್ರಿಕತೆಯನ್ನು ಸೂಕ್ಷ್ಮವಾಗಿ ಟೀಕಿಸಿದರು.

ಆಫ್ರಿಕಾದ ಅಭಿವೃದ್ಧಿ ಪಯಣದಲ್ಲಿ ಭಾರತವು ಬದ್ಧ ಪಾಲುದಾರನಾಗಿ ಉಳಿದಿದೆ. ತನ್ನ ಜನರಿಗೆ ಉಜ್ವಲ ಮತ್ತು ಸುಸ್ಥಿರ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಆಫ್ರಿಕಾದ ಅಭಿವೃದ್ಧಿ ಚೌಕಟ್ಟು, ಕಾರ್ಯಸೂಚಿ 2063 ಅನ್ನು ನಾವು ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆ. ಆಫ್ರಿಕಾದ ಗುರಿಗಳು ನಮ್ಮ ಆದ್ಯತೆಗಳಾಗಿವೆ. ಸಮಾನವಾಗಿ ಒಟ್ಟಿಗೆ ಬೆಳೆಯುವುದು ನಮ್ಮ ವಿಧಾನವಾಗಿದೆ ಎಂದು ಅವರು ಪಶ್ಚಿಮ ಆಫ್ರಿಕಾದ ರಾಷ್ಟ್ರದ ಸಂಸದರನ್ನು ಉದ್ದೇಶಿಸಿ ಹೇಳಿದ್ದಾರೆ.

'ಆಫ್ರಿಕಾ ಒಕ್ಕೂಟವು 2015ರಲ್ಲಿ ಅಂಗೀಕರಿಸಿದ ಕಾರ್ಯಸೂಚಿ 2063'ಎಂಬುದು ಒಂದು ಅಭಿವೃದ್ಧಿ ದೃಷ್ಟಿಕೋನವಾಗಿದೆ. ಬಡತನ ನಿರ್ಮೂಲನೆ, ರಾಜಕೀಯ ಏಕೀಕರಣ, ಭದ್ರತೆ ಮತ್ತು ಶಾಂತಿ, ಪ್ರಜಾಪ್ರಭುತ್ವ ಮತ್ತು ನ್ಯಾಯದ ಆಧಾರದ ಮೇಲೆ ಕೇಂದ್ರೀಕರಿಸಿ ಆರ್ಥಿಕ ಅಭಿವೃದ್ಧಿಯ ದೃಷ್ಟಿಕೋನವನ್ನು ಇದು ವಿವರಿಸುತ್ತದೆ.

'ಆಫ್ರಿಕಾದೊಂದಿಗಿನ ನಮ್ಮ ಅಭಿವೃದ್ಧಿ ಪಾಲುದಾರಿಕೆಯು ಬೇಡಿಕೆ ಆಧಾರಿತವಾಗಿದೆ. ಇದು ಸ್ಥಳೀಯ ಸಾಮರ್ಥ್ಯಗಳನ್ನು ಹೆಚ್ಚಿಸುವುದು ಮತ್ತು ಅವಕಾಶಗಳನ್ನು ಸೃಷ್ಟಿಸುವುದರ ಮೇಲೆ ಕೇಂದ್ರೀಕೃತವಾಗಿದೆ. ನಮ್ಮ ಉದ್ದೇಶ ಹೂಡಿಕೆ ಮಾಡುವುದು ಮಾತ್ರವಲ್ಲ, ಸಬಲೀಕರಣಗೊಳಿಸುವುದು, ಸ್ವಾವಲಂಬಿ ಪರಿಸರ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುವುದು. ನಾವು ಸಾಲ ಬಲೆಯ ರಾಜತಾಂತ್ರಿಕತೆಯನ್ನು ಮಾಡುವುದಿಲ್ಲ'ಎಂದು ಪ್ರಧಾನಿ ಹೇಳಿದ್ದಾರೆ.

ಆಫ್ರಿಕಾದಾದ್ಯಂತ ಚೀನಾ ತನ್ನ ಹೆಜ್ಜೆಗುರುತನ್ನು ವಿಸ್ತರಿಸಿದೆ. ಆದರೆ, ಸ್ಥಳೀಯ ಆಕಾಂಕ್ಷೆಗಳನ್ನು ಗಣನೆಗೆ ತೆಗೆದುಕೊಳ್ಳದ ತನ್ನ ಪರಭಕ್ಷಕ ಸಾಲ ಪದ್ಧತಿಗಳಿಗಾಗಿ ಆಗಾಗ್ಗೆ ಟೀಕೆಗೆ ಒಳಗಾಗಿದೆ.

ವಿದೇಶಾಂಗ ಸಚಿವಾಲಯದಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ 2024ರ ಜೂನ್‌ವರೆಗೆ, ಭಾರತ ಸರ್ಕಾರವು 43 ಆಫ್ರಿಕಾ ದೇಶಗಳಲ್ಲಿ 206 ಯೋಜನೆಗಳನ್ನು ಪೂರ್ಣಗೊಳಿಸಿದೆ. ಒಟ್ಟು 12.37 ಶತಕೋಟಿ ಡಾಲರ್‌ಗಿಂತ ಹೆಚ್ಚಿನ ವೆಚ್ಚದೊಂದಿಗೆ ರಿಯಾಯಿತಿ ಸಾಲಗಳ ಅಡಿಯಲ್ಲಿ ಇನ್ನೂ 65 ಯೋಜನೆಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ. ಇದಲ್ಲದೆ, 81 ಯೋಜನೆಗಳು ಪೂರ್ವಸಿದ್ಧತಾ ಹಂತದಲ್ಲಿವೆ. ಆಫ್ರಿಕಾದಲ್ಲಿ ಭಾರತದ ನಿಧಿಯಿಂದ ಕುಡಿಯುವ ನೀರು, ನೀರಾವರಿ ಯೋಜನೆಗಳು, ವಿದ್ಯುತ್ ಸ್ಥಾವರಗಳು ಮತ್ತು ಪ್ರಸರಣ ಮಾರ್ಗಗಳು, ಸಿಮೆಂಟ್, ಸಕ್ಕರೆ ಮತ್ತು ಜವಳಿ ಕಾರ್ಖಾನೆಗಳು, ತಂತ್ರಜ್ಞಾನ ಪಾರ್ಕ್ ಹಾಗೂ ರೈಲ್ವೆ ಮೂಲಸೌಕರ್ಯಗಳನ್ನು ನಿರ್ಮಿಸಲಾಗುತ್ತಿದೆ.

'ಘಾನಾದಲ್ಲಿ, ನಾವು ಕಳೆದ ವರ್ಷ ತೇಮಾ-ಮಪಕಾಡನ್ ರೈಲು ಮಾರ್ಗವನ್ನು ಉದ್ಘಾಟಿಸಿದ್ದೇವೆ. ಇದು ಆಫ್ರಿಕಾದಲ್ಲಿ ಅತಿದೊಡ್ಡ ಮೂಲಸೌಕರ್ಯ ಯೋಜನೆಯಾಗಿದೆ. ಆಫ್ರಿಕಾದ ಮುಕ್ತ ವ್ಯಾಪಾರ ಆರ್ಥಿಕ ಏಕೀಕರಣವನ್ನು ವೇಗಗೊಳಿಸಲು ಘಾನಾದ ಪ್ರಯತ್ನಗಳನ್ನು ನಾವು ಸ್ವಾಗತಿಸುತ್ತೇವೆ'ಎಂದು ಪ್ರಧಾನಿ ಹೇಳಿದ್ದಾರೆ.

ಮತ್ತೊಂದೆಡೆ, ಚೀನಾ ಆಫ್ರಿಕಾದ ಅತಿದೊಡ್ಡ ದ್ವಿಪಕ್ಷೀಯ ವ್ಯಾಪಾರ ಪಾಲುದಾರ ದೇಶವಾಗಿದ್ದು, ಖಂಡದ ರಫ್ತಿನ ಶೇ 20 ರಷ್ಟು ಈಗ ಅಲ್ಲಿಗೆ ಹೋಗುತ್ತಿದೆ. ಇಲ್ಲಿನ ಆಮದುಗಳಲ್ಲಿ ಸುಮಾರು ಶೇ 16 ರಷ್ಟು ಚೀನಾದಿಂದ ಆಗುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries