HEALTH TIPS

ಶರಣಾಗುವ ಮಾತೇ ಇಲ್ಲ: ಇಸ್ರೇಲ್ ಬೆದರಿಕೆಗೆ ಹಿಜ್ಬುಲ್ಲಾ ಖಡಕ್ ಪ್ರತಿಕ್ರಿಯೆ

 ಬೈರೂತ್‌ : ಶಸ್ತ್ರಾಸ್ತ್ರ ತ್ಯಜಿಸುವಂತೆ ಇಸ್ರೇಲ್‌ ಒಡ್ಡುತ್ತಿರುವ ಬೆದರಿಕೆಗಳಿಗೆ ಹೆದರಿ ಶರಣಾಗುವುದಿಲ್ಲ. ಶಸ್ತ್ರಗಳನ್ನು ಕೆಳಗಿಟ್ಟು ತಲೆ ಬಾಗುವುದಿಲ್ಲ ಎಂದು ಹಿಜ್ಬುಲ್ಲಾ ಸಂಘಟನೆ ನಾಯಕ ನಯೀಮ್‌ ಖ್ವಾಸೆಮ್‌ ಭಾನುವಾರ ಹೇಳಿದ್ದಾರೆ.

ಹಿಜ್ಬುಲ್ಲಾದ ಭದ್ರಕೋಟೆ ಎನಿಸಿರುವ ಬೈರೂತ್‌ನ ಉಪನಗರಗಳಲ್ಲಿ ಶಿಯಾ ಮುಸ್ಲಿಮರ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಬೆಂಬಲಿಗರನ್ನುದ್ದೇಶಿಸಿ ದೂರದರ್ಶನದಲ್ಲಿ ಮಾತನಾಡಿರುವ ನಯೀಮ್‌, 'ಇಂತಹ ಬೆದರಿಕೆಗಳಿಂದ ನಮ್ಮನ್ನು ಶರಣಾಗತರನ್ನಾಗಿಸಲು ಸಾಧ್ಯವಿಲ್ಲ' ಎಂದಿದ್ದಾರೆ.

ದೀರ್ಘ ಸಮಯದಿಂದ ಸಂಘಟನೆಯ ನಾಯಕರಾಗಿದ್ದ ಹಸನ್‌ ನಸ್ರಲ್ಲಾ ಅವರು ಕಳೆದ ವರ್ಷ ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಹತ್ಯೆಯಾಗಿದ್ದಾರೆ. ನಂತರ ಅಧಿಕಾರ ವಹಿಸಿಕೊಂಡಿರುವ ಖ್ವಾಸೆಮ್‌, ಹೋರಾಟವನ್ನು ಕೊನೆಗೊಳಿಸಲು ನವೆಂಬರ್‌ನಲ್ಲಿ ಮಾಡಿಕೊಂಡಿರುವ ಕದನ ವಿರಾಮವನ್ನು ಇಸ್ರೇಲ್‌ ಪಾಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಅಮೆರಿಕದ ರಾಜತಾಂತ್ರಿಕ ಅಧಿಕಾರಿ ಟಾಮ್‌ ಬರಾಕ್‌ ಅವರು ಬೈರೂತ್‌ಗೆ ಸೋಮವಾರ ಆಗಮಿಸುವ ನಿರೀಕ್ಷೆ ಇದೆ. ಇದೇ ವೇಳೆ, ಖ್ವಾಸೆಮ್‌ ಭಾಷಣ ಪ್ರಸಾರವಾಗಿದೆ.

ಇರಾನ್‌ ಬೆಂಬಲಿತ ಹಿಜ್ಬುಲ್ಲಾ ಸಂಘಟನೆಯನ್ನು ವರ್ಷಾಂತ್ಯದೊಳಗೆ ನಿಶ್ಯಸ್ತ್ರಗೊಳಿಸಬೇಕು ಎಂದು ಬರಾಕ್‌ ಈಗಾಗಲೇ ಒತ್ತಾಯಿಸಿದ್ದಾರೆ. ಈ ಕುರಿತು ಅಧಿಕಾರಿಗಳು ಪ್ರತಿಕ್ರಿಯಿಸುವ ಸಾಧ್ಯತೆ ಇದೆ ಎಂದು ಹೆಸರು ಬಹಿರಂಗಪಡಿಸಲು ಬಯಸದ ಲೆಬನಾನ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇಸ್ರೇಲ್‌ ಗಡಿಯಲ್ಲಿರುವ ಹಿಜ್ಬುಲ್ಲಾ ಮಿಲಿಟರಿ ಮೂಲಸೌಕರ್ಯಗಳನ್ನು ನಾಶಮಾಡುತ್ತಿರುವುದಾಗಿ ಲೆಬನಾನ್‌ ಅಧಿಕಾರಿಗಳು ಹೇಳಿಕೊಂಡಿದ್ದಾರೆ.

ನವೆಂಬರ್‌ನಲ್ಲಿ ಮಾಡಿಕೊಂಡಿರುವ ಕದನ ವಿರಾಮ ಒಪ್ಪಂದದ ಹೊರತಾಗಿಯೂ ಇಸ್ರೇಲ್‌ ಪಡೆಗಳು, ಹಿಜ್ಬುಲ್ಲಾ ನೆಲೆಗಳನ್ನು ಗುರಿಯಾಗಿಸಿ ಲೆಬನಾನ್‌ ಮೇಲೆ ದಾಳಿ ಮುಂದುವರಿಸಿವೆ. ಉಗ್ರ ಸಂಘಟನೆಯನ್ನು ನಿಶ್ಯಸ್ತ್ರಗೊಳಿಸುವ ಕೆಲಸವನ್ನು ಲೆಬನಾನ್ ಸೂಕ್ತ ರೀತಿಯಲ್ಲಿ ಮಾಡುತ್ತಿಲ್ಲ ಎಂದು ಇಸ್ರೇಲ್‌ ಆರೋಪಿಸಿದೆ.

ಕದನ ವಿರಾಮ ಒಪ್ಪಂದದ ಪ್ರಕಾರ, ಹಿಜ್ಬುಲ್ಲಾ ತನ್ನ ಹೋರಾಟಗಾರರನ್ನು ದೇಶದ ಗಡಿಯಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ಲಿಟಾನಿ ನದಿಯ ಉತ್ತರ ಭಾಗಕ್ಕೆ ಕರೆದೊಯ್ಯಬೇಕು ಎಂದು ಇಸ್ರೇಲ್‌ ಷರತ್ತುಹಾಕಿದೆ.

ಅದೇ ರೀತಿ ಇಸ್ರೇಲ್‌ ಕೂಡ ತನ್ನ ಪಡೆಗಳು ಲೆಬನಾನ್‌ನಿಂದ ಹಿಂಪಡೆಯಬೇಕಿತ್ತು. ಆದರೆ, ಕಾರ್ಯತಂತ್ರದ ಭಾಗವೆಂದು ಐದು ಹಂತಗಳಲ್ಲಿ ಯೋಧರನ್ನು ನಿಯೋಜಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries