ಢಾಕಾ: 'ಕಳೆದ ವರ್ಷ ಬಾಂಗ್ಲಾದೇಶದಲ್ಲಿ ಸರ್ಕಾರದ ವಿರುದ್ಧ ಭಾರಿ ಪ್ರತಿಭಟನೆ ನಡೆಸಿದವರ ಮೇಲೆ ಗುಂಡು ಹಾರಿಸಲು, ಅವರ ವಿರುದ್ಧ ಕಠಿಣವಾದ ಕ್ರಮ ಜರುಗಿಸಲು ಆಗ ಪ್ರಧಾನಿಯಾಗಿದ್ದ ಶೇಖ್ ಹಸೀನಾ ಆದೇಶಿಸಿದ್ದರು...'
- ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರದ್ದು ಎನ್ನಲಾದ ಧ್ವನಿ ಮುದ್ರಣಗಳನ್ನು ವಿಶ್ಲೇಷಿಸಿದ ಬಳಿಕ ಈ ತೀರ್ಮಾನಕ್ಕೆ ಬಂದಿದ್ದಾಗಿ ಬಿಬಿಸಿಯ 'ಐ ಇನ್ವೆಸ್ಟಿಗೇಷನ್ಸ್' ತಂಡ ಹೇಳಿದೆ.
'ಧ್ವನಿ ಮುದ್ರಣಗಳಲ್ಲಿನ ಮಾತುಗಳನ್ನು ತಿರುಚಿರುವ ಅಥವಾ ತಿದ್ದುಪಡಿ ಮಾಡಿರುವ ಕುರಿತು ಯಾವುದೇ ಸಾಕ್ಷ್ಯಗಳು ಪತ್ತೆಯಾಗಿಲ್ಲ. ಕೃತಕವಾಗಿ ಧ್ವನಿ ಸೃಷ್ಟಿ ಮಾಡಿರುವ ಸಾಧ್ಯತೆಗಳು ಕೂಡ ಬಹಳ ಕಡಿಮೆ' ಎಂದು ಆಡಿಯೊ ವಿಧಿವಿಜ್ಞಾನ ತಜ್ಞರು ಹೇಳಿದ್ದಾಗಿಯೂ ಬಿಬಿಸಿ ತಿಳಿಸಿದೆ.
ಈ ಧ್ವನಿ ಮುದ್ರಣವು ಕಳೆದ ವರ್ಷ ಜುಲೈ 18ಕ್ಕೆ ಸಂಬಂಧಿಸಿದ್ದಾಗಿದೆ. 'ಪ್ರತಿಭಟನಕಾರರ ವಿರುದ್ಧ ಮಾರಕಾಸ್ತ್ರಗಳನ್ನು ಬಳಕೆ ಮಾಡಿ. ಅವರು ಎಲ್ಲಿಯೇ ಕಾಣಲಿ, ಅವರು ಗುಂಡಿಕ್ಕಲಿ' ಎಂಬುದಾಗಿ ಶೇಖ್ ಹಸೀನಾ ಅವರು ಭದ್ರತಾ ಪಡೆಗಳಿಗೆ ನಿರ್ದೇಶನ ನೀಡಿದ್ದರು ಎಂದು ಆರೋಪಿಸಲಾಗಿದೆ.
ಬಾಂಗ್ಲಾದೇಶ ಪೊಲೀಸರು ಕೂಡ, ಹಸೀನಾ ಅವರ ಧ್ವನಿಮುದ್ರಿತ ಮಾತುಗಳೊಂದಿಗೆ ಈ ಆಡಿಯೊದಲ್ಲಿನ ಮಾತುಗಳನ್ನು ಹೊಂದಾಣಿಕೆ ಮಾಡಿದ್ದಾರೆ ಎನ್ನಲಾಗಿದೆ.
ಈ ಆರೋಪಗಳನ್ನು ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಪಕ್ಷ ತಳ್ಳಿ ಹಾಕಿದೆ.




