ಪೆರ್ಲ: ಗ್ರಾಮೀಣ ಪ್ರದೇಶದ ಬಡಜನರಿಗೆ ಶಿಕ್ಷಣ ವ್ಯವಸ್ಥೆ ಒದಗಿಸಿಕೊಡುವ ಮೂಲಕ ಶೈಕ್ಷಣಿಕ ಕ್ರಾಂತಿಗೆ ಕಾರಣರಾಗಿರುವ ಪರ್ತಾಜೆ ವೆಂಕಟ್ರಮಣ ಭಟ್ ಅವರು ಪ್ರಾಥ:ಸ್ಮರಣೀಯರಾಗಿರುವುದಾಗಿ ನಿವೃತ್ತ ಬ್ಯಾಂಕ್ ಉದ್ಯೋಗಿ, ಪುಂಡಿಕಾಯಿ ಚಂದ್ರಶೇಖರ ಭಟ್ ತಿಳಿಸಿದ್ದಾರೆ.
ಅವರು ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲಾ ಸಂಸ್ಥಾಪಕ ಪರ್ತಾಜೆ ವೆಂಕಟ್ರಮಣ ಭಟ್ ಸಂಸ್ಮರಣಾ ಸಮಾರಂಭದಲ್ಲಿ ಅವರ ಶಿಲಾಪ್ರತಿಮೆಗೆ ಹಾರಾರ್ಪಣೆ ನಡೆಸಿ ಮಾತನಾಡಿದರು. ನೂರು ವರ್ಷಕ್ಕೂ ಹಿಂದೆ ಮುಳಿಹಾಸಿನ ಕಟ್ಟಡದಲ್ಲಿ ಆರರಂಭಗೊಂಡಿದ್ದ ಶಿಕ್ಷಣ ಸಂಸ್ಥೆ ಇಂದು ಬೃಹತ್ತಾಗಿ ಬೆಳೆದುನಿಂತಿದ್ದು, ಶಿಕ್ಷಣರಂಗದಲ್ಲಿ ಮಹತ್ವದ ಮೈಲಿಗಲ್ಲಾಗಿದೆ ಎಂದು ತಿಳಿಸಿದರು. ಶಾಲಾ ಪ್ರಭಾರ ವ್ಯವಸ್ಥಾಪಕ ಡಾ. ಪ್ರಸನ್ನ ಮಿತ್ರ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಶಾಲಾ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿರುವ ವಿಶ್ವೇಶ್ವರ ಭಟ್ ಹಾಗೂ ಕೋಟೆ ಗಣಪತಿ ಭಟ್ ಅವರನ್ನು ಗೌರವಿಸಲಾಯಿತು. ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷರಾದ ಸದಾಶಿವ ಭಟ್ ಹರಿನಿಲಯ, ವೆಂಕಟ್ರಾಜ ಮಿತ್ರ ಪರ್ತಾಜೆ, ಶಾಲಾ ಮುಖ್ಯ ಶಿಕ್ಷಕ ಎನ್. ಕೇಶವ ಪ್ರಕಾಶ್, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ನಾರಾಯಣ ನಾಯಕ್, ಶ್ರೀ ಸತ್ಯನಾರಾಯಣ ಕಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸಂಧ್ಯಾ, ಪಿಟಿಎ ಪದಾಧಿಕಾರಿಗಳು, ಶಾಲಾ ಶಿಕ್ಷಕರು, ಬೋಧಕೇತರ ಸಿಬ್ಬಂದಿ, ಉಪಸ್ಥಿತರಿದ್ದರು.
ಶಾಲಾ ಶಿಕ್ಷಕರಾದ ವೇಣುಗೋಪಾಳ್ ಸ್ವಾಗತಿಸಿದರು. ಎಸ್.ಕೃಷ್ಣ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಸುಗುಣಾ ಟೀಚರ್ ವಂದಿಸಿದರು.





