ಲಖನೌ: ಉತ್ತರ ಪ್ರದೇಶದ ಶಹಜಹಾನ್‌ಪುರ ಜಿಲ್ಲೆಯ ಪೊವಯನ್ ತಹಸೀಲ್ ಕಚೇರಿ ಆವರಣದಲ್ಲಿ ಸ್ವಚ್ಛತೆಯ ಕೊರತೆಗೆ ತನ್ನನ್ನೇ ದೂಷಿಸಿಕೊಳ್ಳುತ್ತ ಐಎಎಸ್ ಟ್ರೈನಿ ಅಧಿಕಾರಿಯೊಬ್ಬರು ವಕೀಲರ ಮುಂದೆ, ಬಸ್ಕಿ ಹೊಡೆದಿರುವ ಪ್ರಸಂಗ ನಡೆದಿದೆ.
ಐಎಎಸ್ ಟ್ರೈನಿ ಅಧಿಕಾರಿ ರಿಂಕು ಸಿಂಗ್ (ಉಪ ವಿಭಾಗಾಧಿಕಾರಿ) ಅವರು ಬಸ್ಕಿ ಹೊಡೆದಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿದೆ.
ಶುಚಿತ್ವಕ್ಕೆ ಸಂಬಂಧಿಸಿದಂತೆ ತಹಸೀಲ್‌ನಲ್ಲಿ ತಪಾಸಣೆ ನಡೆಸುವ ವೇಳೆ, ಕೆಲವರು ಬಯಲಿನಲ್ಲಿ ಮೂತ್ರ ವಿಸರ್ಜಿಸುತ್ತಿದ್ದುದನ್ನು ಕಂಡ ಸಿಂಗ್, ಅವರಿಗೆ ಬಸ್ಕಿ ಹೊಡೆಯಲು ಆದೇಶಿಸುವ ಮೂಲಕ ಶಿಕ್ಷೆ ನೀಡಿದರು. ಇದೇ ವೇಳೆ ಹಿರಿಯ ಅಧಿಕಾರಿಯೊಬ್ಬರೂ ಬಯಲಿನಲ್ಲಿ ಮೂತ್ರ ವಿಸರ್ಜಿಸುವಾಗ ಸಿಕ್ಕಿಬಿದ್ದರು. ಅವರಿಗೆ ಪೊಲೀಸರಿಂದ ಬೆದರಿಸಿ, ಬಸ್ಕಿ ಹೊಡೆಯುವಂತೆ ಒತ್ತಾಯಿಸಲಾಗಿತ್ತು.
ಈ ರೀತಿಯ ಶಿಕ್ಷೆಗಳನ್ನು ವಿಧಿಸಿದ ಉಪ ವಿಭಾಗಾಧಿಕಾರಿಯ ಕ್ರಮವನ್ನು ಖಂಡಿಸಿ ವಕೀಲರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
'ಉಪ ವಿಭಾಗಾಧಿಕಾರಿ ಕಚೇರಿಯಲ್ಲಿನ ಶೌಚಾಲಯಗಳೇ ಶುಚಿತ್ವದಿಂದ ಕೂಡಿಲ್ಲ. ಅವುಗಳು ಬಳಕೆಗೆ ಯೋಗ್ಯವಾಗಿಲ್ಲ. ಹೀಗಾದಾಗ ಶೌಚಾಲಯಕ್ಕೆ ಎಲ್ಲಿಗೆ ಹೋಗಬೇಕು' ಎಂದು ಪ್ರತಿಭಟನಾನಿರತರು ರಿಂಕು ಸಿಂಗ್ ಅವರನ್ನು ಪ್ರಶ್ನಿಸಿದರು. ಆಗ ಕಚೇರಿ ಆವರಣದಲ್ಲಿನ ಶೌಚಾಲಯಗಳನ್ನು ಸಿಂಗ್ ಪರಿಶೀಲಿಸಿ, ಸ್ವಚ್ಛತೆಯ ಕೊರತೆಯನ್ನು ಮನಗಂಡರು.
ಇದರಿಂದ ಬೇಸರಗೊಂಡ ಸಿಂಗ್, 'ಕಚೇರಿ ಆವರಣದಲ್ಲಿ ಶುಚಿತ್ವದ ಕೊರತೆಗೆ ಇಲ್ಲಿನ ಅತ್ಯುನ್ನತ ಅಧಿಕಾರಿಯನ್ನೇ ಹೊಣೆ ಮಾಡಬೇಕು. ಇಲ್ಲಿ ಆ ಸ್ಥಾನದಲ್ಲಿರುವ ಅಧಿಕಾರಿ ನಾನೇ ಆಗಿದ್ದು, ನನಗೇ ಶಿಕ್ಷೆ ಆಗಬೇಕು' ಎಂದು ಹೇಳಿದರು.
ಅದರ ಬೆನ್ನಲ್ಲೇ ಅವರು, ಬಸ್ಕಿ ಹೊಡೆಯಲು ಪ್ರಾರಂಭಿಸಿದರು. ಅದನ್ನು ತಡೆಯಲು ಕೆಲ ವಕೀಲರು ಯತ್ನಿಸಿದರು. ಆದರೆ ವಕೀಲರ ಮಾತನ್ನು ಕೇಳದ ಅಧಿಕಾರಿ ಬಸ್ಕಿ ಹೊಡೆಯುವುದನ್ನು ಮುಂದುವರಿಸಿದರು.




