HEALTH TIPS

ಖರ್ಗೆ, ರಾಹುಲ್‌ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕಲ್ಲ: ಹಿಮಂತ ಬಿಸ್ವ ಶರ್ಮ

ಗುವಾಹಟಿ: 'ಅರಣ್ಯ ಜಮೀನು ಅತಿಕ್ರಮಣಕಾರರನ್ನು ಪ್ರಚೋದಿಸಿ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ ಭಾಷಣ ಮಾಡಿದ್ದು ಕಂಡುಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲೂ ಸರ್ಕಾರ ಹಿಂದೇಟು ಹಾಕುವುದಿಲ್ಲ' ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ತಿಳಿಸಿದ್ದಾರೆ.

'ರಾಜ್ಯ ವಿಧಾನಸಭೆಗೆ ಮುಂದಿನ ವರ್ಷ ಚುನಾವಣೆ ನಡೆಯಲಿದ್ದು, ನನ್ನನ್ನು ಜೈಲಿನ ಕಂಬಿ ಹಿಂದೆ ಕಳುಹಿಸುವ ಏಕೈಕ ಅಜೆಂಡಾದೊಂದಿಗೆ ಕಾಂಗ್ರೆಸ್‌ ಪಕ್ಷವು ಸಿದ್ಧತೆ ನಡೆಸುತ್ತಿದೆ' ಎಂದು ಅವರು ಆರೋಪಿಸಿದ್ದಾರೆ.

ಗುರುವಾರ ರಾತ್ರಿ ಇಲ್ಲಿ ನಡೆದ ಪಕ್ಷದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 'ಖರ್ಗೆ ಹಾಗೂ ರಾಹುಲ್‌ ಗಾಂಧಿ ಅವರು ಅಸ್ಸಾಂಗೆ ಭೇಟಿ ನೀಡುವುದಕ್ಕೆ ನಮ್ಮ ಯಾವುದೇ ವಿರೋಧವಿಲ್ಲ. ಅವರ ಸಭೆಯಲ್ಲಿ ಅತಿಕ್ರಮಣದಾರರಿಗೆ ನೇರವಾಗಿ ಪ್ರಚೋದನೆ ನೀಡಿ, ಸರ್ಕಾರಿ ಜಮೀನುಗಳನ್ನು ಅತಿಕ್ರಮಣ ಮಾಡುವ ಮೂಲಕ 'ಲ್ಯಾಂಡ್‌ ಜಿಹಾದ್‌'ಗೆ ಪ್ರೋತ್ಸಾಹ ನೀಡುತ್ತಿದ್ದಾರೆ' ಎಂದು ಆರೋಪಿಸಿದರು.

ಕಳೆದ ಬುಧವಾರ ಗುವಾಹಟಿಯಿಂದ 40 ಕಿ.ಮೀ ದೂರದ ಛಾಯಾಗಾಂವ್‌ ಗ್ರಾಮದಲ್ಲಿ ನಡೆದ ಗುಪ್ತ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಭಾಗವಹಿಸಿ ಭಾಷಣ ಮಾಡಿದ್ದರು.

'ಈ ಸಭೆಯಲ್ಲಿ ಇಬ್ಬರೂ ನಾಯಕರು ಅತಿಕ್ರಮಣಕಾರರನ್ನು ಪ್ರೋತ್ಸಾಹಿಸಿ, ಭಾಷಣ ಮಾಡಿದ್ದರು. ಇದಾದ ಮರುದಿನವೇ ಪೈಕಾನ್‌ ಮೀಸಲು ಅರಣ್ಯದಲ್ಲಿ ಭದ್ರತಾ ಪಡೆಗಳ ಮೇಲೆ ಅತಿಕ್ರಮಣಕಾರರು ದಾಳಿ ನಡೆಸಿದ್ದಾರೆ. ಇದರಿಂದ ಒರ್ವ ನಾಗರಿಕ ಮೃತಪಟ್ಟು, ಪೊಲೀಸರು ಸೇರಿದಂತೆ 20 ಮಂದಿ ಗಾಯಗೊಂಡಿದ್ದಾರೆ' ಎಂದು ಹಿಮಂತ ಆರೋಪಿಸಿದರು.

ಅತಿಕ್ರಮಣಕಾರರಿಗೆ ಕಾಂಗ್ರೆಸ್‌ ಪಕ್ಷವು ಪುನರ್ವಸತಿ ಕಲ್ಪಿಸಲಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ.'ಇಂತಹ ಭಾಷಣಗಳಿಂದಲೇ ಅತಿಕ್ರಮಣಕಾರರು ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿ, ಬಡಿಗೆಗಳಿಂದ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಪೊಲೀಸರು ಈಗಾಗಲೇ ಪ್ರಕರಣ ದಾಖಲಿಸಿದ್ದು, ಇದಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣರಾದವರ ಮೇಲೂ ಕ್ರಮ ಕೈಗೊಳ್ಳಲಾಗುವುದು' ಎಂದು ಎಚ್ಚರಿಕೆ ನೀಡಿದ್ದಾರೆ.

ರಾಹುಲ್‌ ವಿರುದ್ಧ ವಾಗ್ದಾಳಿ:

'ಭ್ರಷ್ಟಾಚಾರ ಪ್ರಕರಣದಲ್ಲಿ ನನ್ನನ್ನು ಜೈಲಿಗೆ ಕಳುಹಿಸುವುದಾಗಿ ರಾಹುಲ್‌ ಗಾಂಧಿ ಹೇಳಿಕೆ ನೀಡಿದ್ದಾರೆ. 'ಪ್ರಶ್ನೆ ಏನೆಂದರೆ, ರಾಹುಲ್‌ ಗಾಂಧಿಯೇ ಯಾವಾಗ ಜೈಲಿಗೆ ಹೋಗುತ್ತಾರೆ ಎಂಬುದು? ರಾಬರ್ಟ್‌ ವಾದ್ರಾ ಅವರಿಗೆ ಸೇರಿದ ಹಲವು ಆಸ್ತಿಗಳನ್ನು ಜಾರಿ ನಿರ್ದೇಶನಾಲಯವು ಮುಟ್ಟುಗೋಲು ಹಾಕಿಕೊಂಡಿದೆ. ಗಾಂಧಿಗಳಿಗಾಗಿ ದೇಶದ ಹಲವು ಜೈಲುಗಳು ಕಾದು ಕೂತಿವೆ' ಎಂದು ಹಿಮಂತ ಬಿಸ್ವ ಶರ್ಮ ವ್ಯಂಗ್ಯವಾಡಿದರು.

'ಅವರು ಕೇವಲ ಒಬ್ಬ ಸಂಸದ. ಹಾಗಿದ್ದ ಮೇಲೆ ಒಬ್ಬ ಮುಖ್ಯಮಂತ್ರಿಯನ್ನು ಹೇಗೆ ಬಂಧಿಸಲು ಸಾಧ್ಯ? ಗಾಂಧಿ ಹೇಳಿಕೆಗೆ ಕಾಂಗ್ರೆಸ್‌ ನಾಯಕರೇ ಪ‍್ರಾಮುಖ್ಯತೆ ನೀಡುವುದಿಲ್ಲ' ಎಂದು ತಿಳಿಸಿದರು.

ದಾಳಿ: 10 ಮಂದಿ ಬಂಧನ

'ಪೈಕಾನ್ ಅರಣ್ಯದಲ್ಲಿ ಒತ್ತುವರಿ ತೆರವುಗೊಳಿಸುವ ವೇಳೆ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿದ ಆರೋಪದ ಮೇಲೆ 10 ಮಂದಿಯನ್ನು ಬಂಧಿಸಲಾಗಿದೆ' ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ತಿಳಿಸಿದ್ದಾರೆ. 'ನಾವು ಈಗಾಗಲೇ ಕ್ರಮ ಕೈಗೊಂಡಿದ್ದೇವೆ. ಘಟನೆ ನಡೆದ ಕೆಲವು ಗಂಟೆಗಳಲ್ಲಿಯೇ 10 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ನಮ್ಮ ತೆರವು ಕಾರ್ಯಾಚರಣೆ ಮುಗಿದಿದೆ' ಎಂದು ಅವರು ಸ್ಪಷ್ಟಪಡಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries