ಕಾಸರಗೋಡು: ಜಿಲ್ಲೆಯಲ್ಲಿ ಬಿರುಸಿನ ಮಳೆಯಾಗುತ್ತಿರುವುದರಿಂದ ಪ್ರಾಕೃತಿಕ ವಿಕೋಪ ಗಮನದಲ್ಲಿರಿಸಿಕೊಂಡು, ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ. ಅಖಿಲ್ ಅವರು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ)ದ ತುರ್ತು ಸಭೆ ನಡೆಸಿದರು. ಈ ಸಂದರ್ಭ ಜಿಲ್ಲಾದ್ಯಂತ ಶಾಲಾ ಸುರಕ್ಷತೆಯನ್ನು ಬಲಪಡಿಸಲು ತುರ್ತು ಸೂಚನೆ ನೀಡಲಾಯಿತು.
ಶಾಲಾ ಕಟ್ಟಡಗಳ ಭದ್ರತೆ, ವಿದ್ಯುತ್ ತಂತಿ, ವಯರಿಂಗ್ ಮತ್ತು ಟ್ರಾನ್ಸ್‍ಫಾರ್ಮರ್‍ಗಳ ಸುರಕ್ಷತೆ, ಜಲಮೂಲಗಳು, ಬಾವಿಗಳು ಮತ್ತು ರಸ್ತೆಗಳಿಂದ ಉಂಟಾಗಬಹುದಾದ ಅಪಾಯ, ತರಗತಿ ವಠಾರಕ್ಕೆ ಹಾವು ಸೇರಿದಂತೆ ವನ್ಯಜೀವಿಗಳಿಂದ ಉಂಟಾಗಬಹುದಾದ ಬೆದರಿಕೆ, ಶಾಲಾ ಸಾರಿಗೆ ಸುರಕ್ಷತೆ ಮತ್ತು ಬೆಂಕಿ ಮತ್ತು ಸಾಮಾನ್ಯ ವಿಪತ್ತಿನ ಅಪಾಯ ನಿರೀಕ್ಷಿಸಲು ಕೆಎಸ್‍ಇಬಿ, ಪಿಡಬ್ಲ್ಯೂಡಿ (ಕಟ್ಟಡಗಳು), ಅಗ್ನಿಶಾಮಕ ಮತ್ತು ರಕ್ಷಣಾ, ಆರ್‍ಟಿಒ ಮತ್ತು ಅರಣ್ಯ ಇಲಾಖೆಗಳ ತಜ್ಞರೊಂದಿಗೆ ಸಮನ್ವಯದೊಂದಿಗೆ ಸಮಿತಿ ರಚಿಸಲು ಸೂಚಿಸಲಾಯಿತು.
ಸ್ವಾಯತ್ತ ಸರ್ಕಾರಿ ಇಲಾಖೆಯ ಎಂಜಿನಿಯರಿಂಗ್ ವಿಭಾಗದ ಮಾರ್ಗಸೂಚಿಗಳನ್ನು ಪಾಲಿಸಬೇಕು. ಸ್ಥಳೀಯಾಡಳಿತ ಸಂಸ್ಥೆಯು ಕಾರ್ಯವಿಧಾನಗಳಿಗೆ ಅಗತ್ಯವಾದ ತಾಂತ್ರಿಕ ಸಹಾಯವನ್ನು ಒದಗಿಸಬೇಕು ಮತ್ತು ಶಾಲಾ ಅಧಿಕಾರಿಗಳ ಸಹಯೋಗದೊಂದಿಗೆ ತ್ವರಿತ ಕ್ರಮ ಕೈಗೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು.ಸ್ವ-ಆಡಳಿತ ಕಾರ್ಯದರ್ಶಿಗಳಿಗೆ ಸೂಚನೆಗಳನ್ನು ನೀಡಲಾಗಿದೆ. ಎಲ್ಲಾ ಶಾಲೆಗಳು ಶಾಲಾ ವಿಪತ್ತು ನಿರ್ವಹಣಾ ಯೋಜನೆಗೆ ಅನುಬಂಧವನ್ನು ಸಿದ್ಧಪಡಿಸಬೇಕು.
ಸಮಿತಿ ಸಭೆಗಳ ನಿರ್ಣಯಗಳು ಮತ್ತು ಕೈಗೊಂಡ ಕ್ರಮಗಳನ್ನು ಶಿಕ್ಷಣ ಉಪ ನಿರ್ದೇಶಕರು ಒಂದು ವಾರದೊಳಗೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು. ನಿರಂತರ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಸಾರ್ವಜನಿಕರ ರಕ್ಷಣೆಗಾಗಿ ಈ ಸೂಚನೆಗಳನ್ನು ಶೀಗ್ರ ಜಾರಿಗೆ ತರುವಂತೆ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಕಟ್ಟುನಿಟ್ಟಾಗಿ ನಿರ್ದೇಶಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕಾಸರಗೋಡು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

