ಅಹಮದಾಬಾದ್: ಶೌಚಾಲಯದಲ್ಲಿ ಕುಳಿತು ವರ್ಚುವಲ್ ವಿಚಾರಣೆಗೆ ಹಾಜರಾದ ವ್ಯಕ್ತಿಯ ವಿರುದ್ಧ ಗುಜರಾತ್ ಹೈಕೋರ್ಟ್ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡಿದೆ. ಜೂನ್ 20ರಂದು ನ್ಯಾಯಮೂರ್ತಿ ನಿರ್ಝರ್ ಎಸ್. ದೇಸಾಯಿ ಪ್ರಕರಣವೊಂದನ್ನು ವಿಚಾರಣೆ ನಡೆಸುತ್ತಿದ್ದಾಗ ಘಟನೆ ನಡೆದಿದ್ದು, ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.
'ವಿಡಿಯೊದಲ್ಲಿ ಕಾಣುತ್ತಿರುವ ವ್ಯಕ್ತಿಯ ವಿರುದ್ಧ ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿ' ಎಂದು ನ್ಯಾಯಮೂರ್ತಿಗಳಾದ ಎ.ಎಸ್. ಸುಪೆಹಿಯಾ ಮತ್ತು ಆರ್.ಟಿ. ವಚ್ಛಾನಿ ಅವರಿದ್ದ ವಿಭಾಗೀಯ ಪೀಠವು ಜೂನ್ 30ರಂದು ಹೈಕೋರ್ಟ್ ರಿಜಿಸ್ಟ್ರಿಗೆ ನಿರ್ದೇಶನ ನೀಡಿ ಆದೇಶ ಹೊರಡಿಸಿದೆ.
ವೀಡಿಯೊದಲ್ಲಿ, ಹಳದಿ ಟಿ-ಶರ್ಟ್ ಧರಿಸಿದ ವ್ಯಕ್ತಿಯೊಬ್ಬರು ಮೊಬೈಲ್ ಫೋನ್ ಬಳಸಿ ಲಾಗಿನ್ ಆಗುವುದು ದಾಖಲಾಗಿದ್ದು, ಪರದೆಯ ಮೇಲೆ ಅವರ ಹೆಸರು 'ಸಮದ್ ಬತ್ತೇರಿ' ಎಂದು ಗುರುತಿಸಲಾಗಿದೆ. 'ಈ ನ್ಯಾಯಾಲಯದ ಪ್ರತಿಷ್ಠೆಯನ್ನು ಹಾಳುಮಾಡುವ ಕುಖ್ಯಾತ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ. ಅದನ್ನು ತಕ್ಷಣವೇ ನಿಷೇಧಿಸಬೇಕು ಮತ್ತು ಅಳಿಸಬೇಕು' ಎಂದು ಪೀಠವು ಹೇಳಿದೆ. ಜುಲೈ 3 ರಂದು ಆದೇಶವನ್ನು ಪ್ರಕಟಿಸಲಾಗಿದೆ.

