HEALTH TIPS

ದೇಶದ ಜನರು ಮೋದಿಯಿಂದ ಮೌನ ಬಯಸುತ್ತಿಲ್ಲ, ಉತ್ತರ ಬಯಸುತ್ತಿದ್ದಾರೆ: ರಾಹುಲ್ ಗಾಂಧಿ

ನವದೆಹಲಿ: ಒಡಿಶಾದ ಕಾಲೇಜುವೊಂದರ ವಿದ್ಯಾರ್ಥಿನಿಯೊಬ್ಬರು ಪ್ರಾಧ್ಯಾಪಕರೊಬ್ಬರ ಲೈಂಗಿಕ ಕಿರುಕುಳಕ್ಕೆ ಬೇಸತ್ತು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರಧಾನಿ ಮೋದಿ ಅವರು ಮೌನವಾಗಿ ಕುಳಿತಿದ್ದು, ದೇಶದ ಹೆಣ್ಣುಮಕ್ಕಳು ಸಾಯುತ್ತಿದ್ದಾರೆ. ದೇಶದ ಜನರು ಪ್ರಧಾನಿಯವರ ಮೌನವನ್ನು ಬಯಸುತ್ತಿಲ್ಲ, ಉತ್ತರಗಳನ್ನು ಬಯಸುತ್ತಿದ್ದಾರೆ ಎಂದು ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

'ಒಡಿಶಾದಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿದ್ದ ವಿದ್ಯಾರ್ಥಿನಿ ಸಾವಿಗೆ ಬಿಜೆಪಿ ವ್ಯವಸ್ಥೆಯೇ ನೇರ ಕಾರಣ. ಆ ಧೈರ್ಯಶಾಲಿ ವಿದ್ಯಾರ್ಥಿನಿ ಲೈಂಗಿಕ ಶೋಷಣೆಯ ವಿರುದ್ಧ ಧ್ವನಿ ಎತ್ತಿದ್ದಳು. ಆದರೆ, ಆಕೆಗೆ ನ್ಯಾಯ ಒದಗಿಸುವ ಬದಲು ಪದೇ ಪದೇ ಬೆದರಿಕೆ, ಕಿರುಕುಳ ಮತ್ತು ಅವಮಾನ ಮಾಡಲಾಗಿದೆ' ಎಂದು ರಾಹುಲ್‌ ಬೇಸರ ಹೊರಹಾಕಿದ್ದಾರೆ.

'ವಿದ್ಯಾರ್ಥಿನಿಯನ್ನು ರಕ್ಷಿಸಬೇಕಾದವರೇ ಆಕೆಯ ಮೇಲೆ ದಬ್ಬಾಳಿಕೆ ನಡೆಸುತ್ತಲೇ ಇದ್ದರು. ಬಿಜೆಪಿಯವರು ಪ್ರತಿ ಬಾರಿಯಂತೆ ಈ ಬಾರಿಯೂ ಆರೋಪಿಗಳನ್ನು ರಕ್ಷಿಸುತ್ತಲೇ ಬಂದಿದ್ದಾರೆ. ಇದು ಆತ್ಮಹತ್ಯೆಯಲ್ಲ, ಇದು ವ್ಯವಸ್ಥೆಯಿಂದ ನಡೆದ ಸಂಘಟಿತ ಕೊಲೆ' ಎಂದು ಗಾಂಧಿ ಆರೋಪಿಸಿದ್ದಾರೆ.

'ಮೋದಿ ಜಿ, ಒಡಿಶಾ ಆಗಿರಲಿ ಅಥವಾ ಮಣಿಪುರ ಆಗಿರಲಿ ದೇಶದ ಹೆಣ್ಣುಮಕ್ಕಳು ಸಾಯುತ್ತಿದ್ದಾರೆ. ಆದರೆ, ನೀವು ಮೌನವಾಗಿ ಕುಳಿತಿದ್ದೀರಿ. ದೇಶದ ಜನತೆ ನಿಮ್ಮ ಮೌನವನ್ನು ಬಯಸುವುದಿಲ್ಲ. ಬದಲಾಗಿ ಉತ್ತರಗಳನ್ನು ಬಯಸುತ್ತಿದ್ದಾರೆ. ಹೆಣ್ಣು ಮಕ್ಕಳು ಭದ್ರತೆ ಮತ್ತು ನ್ಯಾಯ ಬಯಸುತ್ತಿದ್ದಾರೆ' ಎಂದು ಗಾಂಧಿ ಕಿಡಿಕಾರಿದ್ದಾರೆ.

ಶೇ 95ರಷ್ಟು ಸುಟ್ಟ ಗಾಯಗಳಿಂದ ಮೂರು ದಿನ ಜೀವನ್ಮರಣ ಹೋರಾಟ ನಡೆಸಿದ ವಿದ್ಯಾರ್ಥಿನಿ ಭುವನೇಶ್ವರದ ಏಮ್ಸ್‌ನಲ್ಲಿ ಕೊನೆಯುಸಿರೆಳೆದಿದ್ದಾರೆ. ತಮಗೆ ಲೈಂಗಕ ಕಿರುಕುಳ ನೀಡಿದ ಪ್ರೊಫೆಸರ್ ವಿರುದ್ಧ ಪ್ರಾಚಾರ್ಯರು ಕ್ರಮಕ್ಕೆ ಮುಂದಾಗದ ಹಿನ್ನೆಲೆಯಲ್ಲಿ ಮನನೊಂದ ವಿದ್ಯಾರ್ಥಿನಿ ಶನಿವಾರ ಈ ನಿರ್ಧಾರ ಕೈಗೊಂಡಿದ್ದರು.

ಮೊದಲಿಗೆ ಬಾಲೇಶ್ವರದ ಜಿಲ್ಲಾಸ್ಪತ್ರೆಗೆ ವಿದ್ಯಾರ್ಥಿನಿಯನ್ನು ದಾಖಲಿಸಲಾಗಿತ್ತು. ಬಳಿಕ, ಉನ್ನತ ಚಿಕಿತ್ಸೆಗಾಗಿ ಭುವನೇಶ್ವರದ ಏಮ್ಸ್‌ಗೆ ಕಳುಹಿಸಲಾಗಿತ್ತು.

'ಫಕೀರ್ ಮೋಹನ್ ಸ್ವಾಯತ್ತ ಕಾಲೇಜಿನ ವಿದ್ಯಾರ್ಥಿನಿಯ ನಿಧನದ ಸುದ್ದಿ ಕೇಳಿ ನನಗೆ ತುಂಬಾ ದುಃಖವಾಗಿದೆ. ಸರ್ಕಾರದ ಎಲ್ಲಾ ಪ್ರಯತ್ನಗಳು ಮತ್ತು ತಜ್ಞ ವೈದ್ಯಕೀಯ ತಂಡದ ಅವಿಶ್ರಾಂತ ಪ್ರಯತ್ನಗಳ ಹೊರತಾಗಿಯೂ ಸಂತ್ರಸ್ತೆಯ ಜೀವವನ್ನು ಉಳಿಸಲು ಸಾಧ್ಯವಾಗಲಿಲ್ಲ. ಮೃತ ವಿದ್ಯಾರ್ಥಿನಿಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಈ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ನೀಡಬೇಕೆಂದು ಭಗವಾನ್ ಜಗನ್ನಾಥನನ್ನು ಬೇಡಿಕೊಳ್ಳುತ್ತೇನೆ' ಎಂದು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ 'ಎಕ್ಸ್‌' ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries