ಭಾರತದ ಬಾಹ್ಯಾಕಾಶ ನಿಯಂತ್ರಕದಿಂದ ಅನುಮತಿ ಪಡೆಯುವುದು ಅಂತಿಮ ಹಂತವಾಗಿತ್ತು. ಇದರೊಂದಿಗೆ, ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ಒದಗಿಸಲು ಸ್ಟಾರ್‌ಲಿಂಕ್ ಎದುರು ಇದ್ದ ಎಲ್ಲ ಅಡತಡೆಗಳು ನಿವಾರಣೆಯಾದಂತಾಗಿದೆ ಎಂದು ಮೂಲಗಳು ತಿಳಿಸಿವೆ.
ಮಸ್ಕ್ ಒಡೆತನದ ಉದ್ಯಮವು, ಭಾರತದಲ್ಲಿ ವಾಣಿಜ್ಯ ಕಾರ್ಯಾಚರಣೆ ಆರಂಭಿಸುವುದಕ್ಕೆ ಪರವಾನಗಿ ಪಡೆದುಕೊಳ್ಳಲು 2022ರಿಂದ ಕಾಯುತ್ತಿತ್ತು. ಕೇಂದ್ರ ದೂರಸಂಪರ್ಕ ಇಲಾಖೆಯು ಕಳೆದ ತಿಂಗಳಷ್ಟೇ ಅನುಮೋದನೆ ನೀಡಿತ್ತು. ಆದರೂ, ಬಾಹ್ಯಾಕಾಶ ನಿಯಂತ್ರಕದಿಂದ ಅನುಮತಿ ದೊರೆತಿರಲಿಲ್ಲ.
ಈ ಕುರಿತು ಸ್ಟಾರ್‌ಲಿಂಕ್ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಯುಟೆಲ್‌ಸ್ಯಾಟ್ ಒನ್‌ವೆಬ್ ಮತ್ತು ಜಿಯೊ ಸ್ಯಾಟ್‌ಲೈಟ್ ಕಮ್ಯುನಿಕೇಷನ್ ಈಗಾಗಲೇ ಈ ಪರವಾನಗಿಯನ್ನು ಪಡೆದಿವೆ. ಸ್ಟಾರ್‌ಲಿಂಕ್ ಮೂರನೇ ಕಂಪನಿಯಾಗಿದೆ. ಇದೇ ರೀತಿ, ಅಮೆಜಾನ್‌ನ ಕೈಪರ್ ಅನುಮತಿಗಾಗಿ ಕಾಯುತ್ತಿದೆ.
ವಾಣಿಜ್ಯ ಉಪಗ್ರಹ ಸಂವಹನದ ತರಂಗಾಂತರದ ಬೆಲೆ, ನಿಯಮ ಮತ್ತು ನಿಬಂಧನೆಗಳ ಕುರಿತು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ಸರ್ಕಾರಕ್ಕೆ ಈಚೆಗಷ್ಟೇ ಶಿಫಾರಸು ಸಲ್ಲಿಸಿದೆ. ರೇಡಿಯೊ ತರಂಗಾಂತರದ ಆವರ್ತನಗಳ ಹಂಚಿಕೆಯ ನಂತರ ಸ್ಟಾರ್‌ಲಿಂಕ್ ಸೇವೆಗಳನ್ನು ಆರಂಭಿಸಬಹುದಾಗಿದೆ.



