ಕಾಸರಗೋಡು: ಶಿಕ್ಷಣ ಸಂಸ್ಥೆಗಳ ಆವರಣದೊಳಗೇ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಶೈಕ್ಷಣಿಕ ಪರಿಕರ, ಲಘು ಆಹಾರ ಸಾಮಗ್ರಿ ಲಭ್ಯವಾಗಿಸುವಂತೆ ಮಾಡುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಮತ್ತು ಕುಟುಂಬಶ್ರೀ ಜಂಟಿಯಾಗಿ ಜಾರಿಗೆ ತಂದಿರುವ ಮಾ ಕೇರ್ ಸೆಂಟರ್ ಮಾದರಿಯಾಗುತ್ತಿದೆ.
ಬೆಳಗ್ಗೆ ಮನೆಯಿಂದ ಹೊರಡುವ ವಿದ್ಯಾರ್ಥಿಗಳು ನಾನಾ ನೆಪವೊಡ್ಡಿ ಪೇಟೆಯಲ್ಲಿ ಸುತ್ತಾಡುತ್ತಿರುವ ಸನ್ನಿವೇಶ ಹೆಚ್ಚಾಗುತ್ತಿದೆ. ಅಲ್ಲದೆ ಮಧ್ಯಾಹ್ನದ ಭೋಜನ ವಿರಾಮದ ವೇಳೆಯಲ್ಲೂ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಪರಿಕರ ಅಥವಾ ಇತರ ಲಘು ಆಹಾರ ಸಾಮಗ್ರಿ ಖರೀದಿ ನೆಪದಲ್ಲಿ ಶಾಲೆ ಆವರಣದಿಂದ ಹೊರಗಿರುವ ಪೇಟೆಗೆ ತೆರಳಿ ವ್ಯಾಪಾರಿ ಸಂಸ್ಥೆ ಎದುರು ಸುತ್ತಾಡುತ್ತಿರುವುದರಿಂದ ಇವರನ್ನು ನಿಯಂತ್ರಿಸುವುದು ಕೆಲವು ಶಾಲಾ ಶಿಕ್ಷಕರಿಗೆ ಹಾಗೂ ಅಧಿಕಾರಿಗಳಿಗೂ ತಲೆನೋವಾಗಿ ಪರಿಣಮಿಸುತ್ತಿದೆ.
ಪ್ರಸಕ್ತ ಎಳೆಯ ಮಕ್ಕಳನ್ನು ಕೇಂದ್ರೀಕರಿಸಿ, ಅವರನ್ನು ಮಾದಕ ದ್ರವ್ಯಗಳ ದಾಸರನ್ನಾಗಿಸಲು ಕೆಲವರು ಸಂಚುಹೂಡುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಮಕ್ಕಳು ಶಾಲೆಗೆ ಹೋಗಿ ಹಿಂತಿರುಗುವವರೆಗೂ ಹೆತ್ತವರನ್ನು ಆತಂಕದಲ್ಲೇ ಕಾಲ ಕಳೆಯುವಂತೆ ಮಾಡುತ್ತಿದೆ. ಶಾಲೆಗೆ ತೆರಳುವ ಮಕ್ಕಳು ಪೇಟೆಯಿಂದ ಖರೀದಿಸುವ ಕಳಪೆ ಆಹಾರ ಸಾಮಗ್ರಿ ಸೇವಿಸುತ್ತಿರುವುದರಿಂದ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಇವೆಲ್ಲವನ್ನೂ ತಪ್ಪಿಸುವ ನಿಟ್ಟಿನಲ್ಲಿ ಶಾಲೆಗಳಲ್ಲಿ ಮಾ ಕೇರ್ ಸೆಂಟರ್ ಆರಂಭಿಸಲು ಶಿಕ್ಷಣ ಇಲಾಖೆ ಮುಂದಾಗಿದ್ದು, ಇದಕ್ಕೆ ಕುಟುಂಬಶ್ರೀ ಸಹಕಾರ ಪಡೆದುಕೊಂಡಿದೆ.
ಶಾಲಾ ಆವರಣದೊಳಗೆ ಕಾರ್ಯನಿರ್ವಹಿಸಲಿರುವ 'ಮಾ ಕೇರ್ ಸೆಂಟರ್‍ಗಳು ಪೌಷ್ಟಿಕ ತಿನಿಸುಗಳನ್ನೇ ಪೂರೈಸಲಿದೆ. ಲಘು ಆಹಾರದ ಜತೆಗೆ ಶೈಕ್ಷಣಿಕ ಸಾಮಗ್ರಿಗಳು, ಬಾಲಕಿಯರಿಗಾಗಿ ನ್ಯಾಪ್‍ಕಿನ್‍ಗಳಂತಹ ಅಗತ್ಯ ವಸ್ತುಗಳನ್ನು ಪೂರೈಸಲಾಗುವುದು. ಈ ಮೂಲಕ ಶಾಲೆಯಿಂದ ಹೊರಹೋಗಿ ಮಕ್ಕಳ ಅನಗತ್ಯ ಸುತ್ತಾಟ, ಆರೋಗ್ಯಕ್ಕೆ ಹಾನಿಕಾರಕ ಪದಾರ್ಥಗಳ ಸೇವೆನೆ, ಮಾದಕತೆ ಬೆರೆತ ಸಿಹಿತಿನಿಸುಗಳಿಗಾಗಿ ಸುತ್ತಾಟ ಇವೆಲ್ಲವೂ ತಪ್ಪಿಸಲು ಸಾಧ್ಯವಾಗಲಿದೆ ಎಂಬುದು ಹೆತ್ತವರ ಅಭಿಪ್ರಾಯವಾಗಿದೆ.
ಕನಿಷ್ಠ ಬೆಲೆ:
ಬೆಳಿಗ್ಗೆ 7.30 ರಿಂದ ಸಂಜೆ 6.30 ರವರೆಗೆ ಕಾರ್ಯನಿರ್ವಹಿಸುವ ಈ ಕೇಂದ್ರಗಳು ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಸಾಮಗ್ರಿ ಒದಗಿಸಿಕೊಡಲಿದೆ. ಕುಟುಂಬಶ್ರೀ ನೇತೃತ್ವದಲ್ಲಿ, 2023-24ರ ಅವಧಿಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ 'ಮಾ ಕೇರ್' ಕೇಂದ್ರವನ್ನು ಆರಂಭಿಸಲಾಗಿದೆ. ಯೋಜನೆಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವಿಸ್ತರಿಸಲು ಕುಟುಂಬಶ್ರೀ ಮಿಷನ್ ಮತ್ತು ಶಿಕ್ಷಣ ಇಲಾಖೆ ಯೋಜನೆ ಹಮ್ಮಿಕೊಂಡಿದೆ.
ಪ್ರಸಕ್ತ ಕಾಸರಗೋಡು ಜಿಲ್ಲೆಯ 16 ಶಾಲೆಗಳಲ್ಲಿ ಮಾ ಕೇರ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಜುಲೈನಲ್ಲಿ ಹೈಯರ್ ಸೆಕೆಂಡರಿ ಮತ್ತು ಹೈಸ್ಕೂಲ್ ಶಾಲೆಗಳಲ್ಲಿಈ ಯೋಜನೆಯನ್ನು ಪ್ರಾರಂಭಿಸುವುದು ಇದರ ಉದ್ದೇಶ.
ಅಭಿಮತ:
-ಶಿಕ್ಷಣ ಕೇಂದ್ರ ವಠಾರದಲ್ಲಿ ಕುಟುಂಬಶ್ರೀ ಮತ್ತು ಶಿಕ್ಷಣ ಇಲಾಖೆ ಜಂಟಿಯಾಗಿ 'ಮಾ ಕೇರ್'ಸೆಂಟರ್ ಆರಂಭಿಸುವ ಮೂಲಕ ವಿದ್ಯಾರ್ಥಿಗಳನ್ನು ವಿವಿಧ ಶೈಕ್ಷಣಿಕ ಪರಿಕರಗಳು ಹಾಗೂ ಇತರ ಲಘು ಆಹಾರ ವಸ್ತುಗಳಿಗಾಗಿ ಪೇಟೆ ಸುತ್ತಾಡುವುದನ್ನು ತಡೆಗಟ್ಟಲು ಸಾಧ್ಯವಾಗಲಿದೆ. ಜತೆಗೆ ಆರೋಗ್ಯಕ್ಕೆ ಹಾನಿಕಾರಕ ತಿನಿಸುಗಳ ಖರೀದಿ, ಮಾದಕ ಲೇಪನ ಹೊಂದಿದ ಸಿಹಿಪದಾರ್ಥಗಳ ಖರೀದಿಗೂ ಒಂದಷ್ಟು ಕಡಿವಾಣ ಸಾಧ್ಯವಾಗಲಿದೆ. ಪಠ್ಯೋಪಕರಣ, ತಿನಿಸು ಮಾರಾಟದ ಜತೆಗೆ ವಿದ್ಯಾರ್ಥಿಗಳಿಗೆ ಸಾಂತ್ವನ ಮತ್ತು ಆತ್ಮವಿಶ್ವಾಸ ಮೂಡಿಸುವ ಕೆಲಸವನ್ನೂ ಕೇಂದ್ರ ನಡೆಸಲಿದೆ.
ಕೆ. ರತೀಶ್ ಕುಮಾರ್, ಜಿಲ್ಲಾ ಸಂಯೋಜಕ
ಕುಟುಂಬಶ್ರೀ ಕಾಸರಗೋಡು






