ನವದೆಹಲಿ: ಕಾಂಗ್ರೆಸ್‌ನ ಸಂಸದೆ ಪ್ರಿಯಾಂಕಾ ಗಾಂಧಿ ಅವರ ಪತಿ, ಉದ್ಯಮಿ ರಾಬರ್ಟ್ ವಾದ್ರಾ ಅವರು ಬ್ರಿಟನ್ ಮೂಲದ ಶಸ್ತ್ರಾಸ್ತ್ರ ಸಲಹೆಗಾರ ಸಂಜಯ್ ಭಂಡಾರಿ ಅವರಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ವಿಚಾರಣೆಗೆ ಸೋಮವಾರ ಹಾಜರಾಗಿದ್ದಾರೆ.
ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ತನಿಖೆ ನಡೆಯುತ್ತಿರುವ ಈ ಪ‍್ರಕರಣದಲ್ಲಿ, ಜೂನ್ 10ರಂದು ವಿಚಾರಣೆಗೆ ಹಾಜರಾಗುವಂತೆ ಈ ಹಿಂದೆ ಸಮನ್ಸ್ ನೀಡಲಾಗಿತ್ತು. ಜೂನ್ 9ರಂದು ಜ್ವರದ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ವಾದ್ರಾ ವಿಚಾರಣೆಗೆ ಹಾಜರಾಗಿರಲಿಲ್ಲ.
ಪಿಎಂಎಲ್‌ಎ ಕಾಯ್ದೆಯಡಿ ಹೇಳಿಕೆ ದಾಖಲಿಸಿಕೊಳ್ಳಲು ಇ.ಡಿ ವಾದ್ರಾಗೆ ಮತ್ತೆ ಸಮನ್ಸ್ ಜಾರಿಗೊಳಿಸಿತ್ತು.
ಹರಿಯಾಣದಲ್ಲಿ 2008ರಲ್ಲಿ ನಡೆದ ಭೂ ಒಪ್ಪಂದದಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ತನಿಖಾ ಸಂಸ್ಥೆಯು ವಾದ್ರಾ ಅವರನ್ನು ಏಪ್ರಿಲ್‌ನಲ್ಲಿ ಸತತ ಮೂರು ದಿನ ವಿಚಾರಣೆಗೆ ಒಳಪಡಿಸಿತ್ತು. ಮೂರು ಪ್ರಕರಣಗಳಲ್ಲಿ ಇ.ಡಿ ತನಿಖೆ ನಡೆಸುತ್ತಿದೆ.
ದೆಹಲಿಯಲ್ಲಿ ಆದಾಯ ತೆರಿಗೆ ಇಲಾಖೆಯು 2016ರಲ್ಲಿ ದಾಳಿ ನಡೆಸಿದ ಬೆನ್ನಿಗೆ ಭಂಡಾರಿ ಲಂಡನ್‌ಗೆ ಪರಾರಿ ಆಗಿದ್ದರು.

