ಇಸ್ಲಾಮಾಬಾದ್ (PTI): ಭಾರತವು ಸಿಂಧೂ ಜಲ ಒಪ್ಪಂದವನ್ನು (ಐಡಬ್ಲ್ಯುಟಿ) ಅಮಾನತಿನಲ್ಲಿರಿಸಿದ ಕಾರಣ ನೀರಿನ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದರು.
ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಯ ನಂತರ ಪಾಕಿಸ್ತಾನಕ್ಕೆ ಪ್ರತ್ಯುತ್ತರ ನೀಡುವ ಉದ್ದೇಶದಿಂದ 1960ರ ಸಿಂಧೂ ಜಲ ಒಪ್ಪಂದವನ್ನು ಭಾರತವು ಅಮಾನತಿನಲ್ಲಿರಿಸಿತು.
ಪಾಕಿಸ್ತಾನದ ಕೃಷಿ ಕ್ಷೇತ್ರವು ಸಿಂಧೂ, ಝೇಲಂ ಹಾಗೂ ಚಿನಾಬ್ ನದಿಗಳ ನೀರನ್ನೇ ಅವಲಂಬಿಸಿದೆ.
ರಾಷ್ಟ್ರೀಯ ತುರ್ತುಸ್ಥಿತಿ ಕಾರ್ಯಾಚರಣೆ ಕೇಂದ್ರಕ್ಕೆ ಶೆಹಬಾಜ್ ಮಂಗಳವಾರ ಭೇಟಿ ನೀಡಿದ್ದರು. ಈ ವೇಳೆ ಅವರು ನೀರಿನ ಸಮಸ್ಯೆ ಕುರಿತು ಮಾತನಾಡಿದರು ಎಂದು ಸರ್ಕಾರಿ ಸುದ್ದಿಸಂಸ್ಥೆ ತಿಳಿಸಿದೆ.
'ನಮ್ಮ ಶತ್ರು ಜಲ ಒಪ್ಪಂದದ ವಿರುದ್ಧ ಕ್ರಮ ತೆಗೆದುಕೊಳ್ಳಲು ಬಯಸಿದೆ. ಹೀಗಾಗಿ ದಿಯಾಮರ್ ಭಾಷಾದಂತಹ ಅಣೆಕಟ್ಟೆಗಳಿಂದ ನೀರು ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಕೆಲ ವರ್ಷಗಳಲ್ಲಿ ನಮ್ಮದೇ ಸಂಪನ್ಮೂಲಗಳಿಂದ ನೀರು ಸಂಗ್ರಹಿಸಲಾಗುವುದು. ಇದರಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪಾತ್ರವು ಮಹತ್ವದ್ದಾಗಿದೆ' ಎಂದು ಶೆಹಬಾಜ್ ಹೇಳಿದರು ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.




