HEALTH TIPS

ಬಿಹಾರ ಮತದಾರರ ಪಟ್ಟಿಯಲ್ಲಿವೆ ನೇಪಾಳ, ಬಾಂಗ್ಲಾ, ಮ್ಯಾನ್ಮಾರ್‌ ಪ್ರಜೆಗಳ ಹೆಸರು!

ನವದೆಹಲಿ: ಬಿಹಾರದಲ್ಲಿ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (ಎಸ್‌ಐಆರ್‌) ಮುಂದುವರಿದಿದ್ದು, ಮತದಾರರ ಪಟ್ಟಿಯಲ್ಲಿ ನೇಪಾಳ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ ಪ್ರಜೆಗಳ ಹೆಸರುಗಳನ್ನು ಬೂತ್‌ಮಟ್ಟದ ಏಜೆಂಟ್‌ಗಳು (ಬಿಎಲ್‌ಎ) ಪತ್ತೆಹಚ್ಚಿದ್ದಾರೆ. ವಿಚಾರಣೆ ಬಳಿಕ ಆ ಹೆಸರುಗಳನ್ನು ಅಂತಿಮ ಪಟ್ಟಿಯಿಂದ ಕೈಬಿಡಲಾಗುವುದು ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ಆಗಸ್ಟ್ 1ರಿಂದ ಮತದಾರರ ಪಟ್ಟಿಯಲ್ಲಿರುವ ಹೆಸರುಗಳ ಕುರಿತು ವಿಚಾರಣೆ ನಡೆಸಲಾಗುತ್ತದೆ. ಸೆಪ್ಟೆಂಬರ್ 30ರಂದು ಪ್ರಕಟವಾಗುವ ಅಂತಿಮ ಮತದಾರರ ಪಟ್ಟಿಯಿಂದ ಅಕ್ರಮ ಮತದಾರರ ಹೆಸರುಗಳನ್ನು ಕೈಬಿಡಲಾಗುತ್ತದೆ. ಆದರೆ, ಈಗಿನ ಮತದಾರರ ಪಟ್ಟಿಯಲ್ಲಿ ಪತ್ತೆಯಾದ ನೇಪಾಳ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ ಪ್ರಜೆಗಳ ಹೆಸರುಗಳ ಕುರಿತಾದ ಯಾವುದೇ ಅಂಕಿಅಂಶಗಳನ್ನು ಚುನಾವಣಾ ಆಯೋಗದ ಮೂಲಗಳು ಒದಗಿಸಿಲ್ಲ.

ರಾಜ್ಯದ ನಿವಾಸಿಗಳ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡುವುದಕ್ಕೆ ಪರಿಗಣಿಸಲಾಗುವ 11 ದಾಖಲೆಗಳ ಪಟ್ಟಿಯನ್ನು ಚುನಾವಣಾ ಆಯೋಗ ಜೂನ್‌ 24ರಂದು ಪ್ರಕಟಿಸಿತ್ತು. ಈ ಪಟ್ಟಿಯು ಆಧಾರ್‌ ಕಾರ್ಡ್‌, ಎಪಿಕ್ ಮತ್ತು ಪಡಿತರಚೀಟಿ ಒಳಗೊಂಡಿರಲಿಲ್ಲ. ಹೀಗಾಗಿ, ಆಧಾರ್‌, ಎಪಿಕ್‌ ಹಾಗೂ ಪಡಿತರ ಚೀಟಿಗಳನ್ನು ಪರಿಗಣಿಸದೇ ಇರುವುದಕ್ಕೆ ಸೂಕ್ತ ಕಾರಣಗಳನ್ನು ನೀಡುವಂತೆ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಈಚೆಗೆ ಸೂಚಿಸಿತ್ತು.

ಇದರ ಬೆನ್ನಲ್ಲೇ ಬೂತ್ ಮಟ್ಟದ ಅಧಿಕಾರಿಗಳು ಮತದಾರರ ಮಾಹಿತಿ ಸಂಗ್ರಹಿಸಲು ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ. ಬಿಹಾರದಲ್ಲಿ ಸುಮಾರು 8 ಕೋಟಿ ಮತದಾರರಿದ್ದು, ಜುಲೈ 25ರವರೆಗೆ ತಮ್ಮ ಪೌರತ್ವ ಮತ್ತು ಜನ್ಮ ದಿನಾಂಕವನ್ನು ಸಾಬೀತುಪಡಿಸುವ ದಾಖಲೆಗಳನ್ನು ಸಲ್ಲಿಸಬಹುದಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಒಂದು ವೇಳೆ ಜುಲೈ 25ರೊಳಗೆ ದಾಖಲೆಗಳನ್ನು ಒದಗಿಸಲು ಸಾಧ್ಯವಾಗದಿದ್ದರೆ ಅಥವಾ ಆಕ್ಷೇಪಣೆಗಳನ್ನು ಸಲ್ಲಿಸಲು ಆಗಸ್ಟ್ 30ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ'ಗೆ ವಿರೋಧ ವ್ಯಕ್ತಪಡಿಸಿರುವ ವಿಪಕ್ಷಗಳು, 'ಚುನಾವಣಾ ಆಯೋಗದ ಈ ಪ್ರಕ್ರಿಯೆಯು ಬಡವರು ಮತ್ತು ವಲಸೆ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುವುದಾಗಿ' ಎಂದು ಆರೋಪಿಸಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries