ಕಾಸರಗೋಡು: ಆಲ್‍ಕೇರಳ ಪೋಟೋಗ್ರಾಫರ್ಸ್ ಅಸೋಸಿಯೇಶನ್ ಕಾಸರಗೋಡು ಜಿಲ್ಲಾ ಸಮಿತಿಯ ವತಿಯಿಂದ ಕಾಸರಗೋಡು ಎಕೆಪಿಎ ಭವನದಲ್ಲಿ ಭಾನುವಾರ ಚಿತ್ರರಚನಾ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಕಿರಿಯ, ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿವಿಧೆಡೆಗಳಿಂದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಎಕೆಪಿಎ ರಾಜ್ಯ ಕಾರ್ಯದರ್ಶಿ ಹರೀಶ್ ಪಾಲಕುನ್ನು ಚಿತ್ರರಚನಾ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳನ್ನು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದರಿಂದ ಅವರಿಗೆ ಅವಕಾಶಗಳು ಲಭಿಸುತ್ತದೆ. ಮಕ್ಕಳು ನಿಂತ ನೀರಾಗದೆ ನಿರಂತರ ಚಲಿಸುವಂತಿರಬೇಕು. ಕೇವಲ ಬಹುಮಾನಕ್ಕಾಗಿ ಮಾತ್ರ ಸ್ಪರ್ಧಿಸುವ ಜಾಯಮಾನವಿರಬಾರದು. ಭಾಗವಹಿಸಿದಾಗ ಲಭಿಸುವ ಅನುಭವದಿಂದ ಬಹುಮಾನಗಳು ತಾನಾಗಿಯೇ ದೊರಕುವುದು ಎಂದು ತಿಳಿಸಿದ ಅವರು ಜಿಲ್ಲಾಮಟ್ಟದಲ್ಲಿ ಸ್ಪರ್ಧೆಯನ್ನು ಆಯೋಜಿಸಿರುವ ಕುರಿತು ಶ್ಲಾಘನೆಯನ್ನು ವ್ಯಕ್ತಪಡಿಸಿದರು.
ಎಕೆಪಿಎ ಜಿಲ್ಲಾ ಅಧ್ಯಕ್ಷ ಸುಗುಣನ್ ಇರಿಯ ಅಧ್ಯಕ್ಷತೆ ವಹಿಸಿದ್ದರು. ಜೊತೆ ಕಾರ್ಯದರ್ಶಿ ಸುಧೀರ್, ಕಾಞಂಗಾಡು ವಲಯ ಅಧ್ಯಕ್ಷ ರಮೇಶನ್ ಮಾವುಂಗಾಲು, ಕಾಸರಗೋಡು ವಲಯ ಅಧ್ಯಕ್ಷ ಸನ್ನಿಜೇಕಬ್, ಶರೀಫ್ ಕಾಞಂಗಾಡು, ಮನು ಎಲ್ಲೋರ, ಪ್ರಜೀಶ್, ಶ್ರೀಕಾಂತ್ ಕಾಸರಗೋಡು, ಶ್ಯಾಮಪ್ರಸಾದ ಸರಳಿ, ಗೌತಮ್, ಬಾಲಕೃಷ್ಣ ನೀರ್ಚಾಲು, ನಾರಾಯಣ ಬದಿಯಡ್ಕ, ಎಕೆಪಿಎ ಸದಸ್ಯರು, ಸ್ಪರ್ಧೆಗಳ ವಿದ್ಯಾರ್ಥಿಗಳ ಪಾಲಕರು ಪಾಲ್ಗೊಂಡಿದ್ದರು. ಮನೀಶ್ ಚಿತ್ರರಚನಾ ಸ್ಪರ್ಧೆಯ ಮೇಲ್ನೋಟವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ರಾಜೇಂದ್ರನ್ ಸ್ವಾಗತಿಸಿ, ಕೋಶಾಧಿಕಾರಿ ಪ್ರಜಿತ್ ವಂದಿಸಿದರು. ಎಕೆಪಿಎ ಸದಸ್ಯರ ಮಕ್ಕಳ ಸಹಿತ ಇತರ ಆಸಕ್ತ ವಿದ್ಯಾರ್ಥಿಗಳೂ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.





